ಮುಂದಿನ ಬಾರಿ ನರೇಂದ್ರಮೋದಿ ದೇಶದ ಪ್ರಧಾನಿಯಾಗಲು ಸಾಧ್ಯವಿಲ್ಲ: ಸಚಿವ ಖಾದರ್
ಉಳ್ಳಾಲ, ಅ. 3: ಸುಳ್ಳು ಭರವಸೆ ನೀಡಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೇರಿದ್ದು ಜನರಲ್ಲಿ ಬಿಜೆಪಿಯ ಬಗ್ಗೆ ಉತ್ತಮ ಅಭಿಪ್ರಾಯವಿಲ್ಲ. ನರೇಂದ್ರಮೋದಿ ಮುಂದೆ ದೇಶದ ಪ್ರಧಾನಿಯಾಗಲು ಸಾಧ್ಯವಿಲ್ಲ. ಉತ್ತರಪ್ರದೇಶ, ಬಿಹಾರ, ಸೇರಿದಂತೆ ಬಹಳಷ್ಟು ರಾಜ್ಯಗಳಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಥಾನ ಗಳಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದರು.
ಅವರು ಉಳ್ಳಾಲದಲ್ಲಿ ಮಂಗಳವಾರ ನಡೆದ ಉಳ್ಳಾಲ ನಗರ ಕಾಂಗ್ರೆಸ್ ಮತ್ತು ಯು.ಟಿ. ಖಾದರ್ ಅಭಿಮಾನಿಗಳ ವೇದಿಕೆಯ ವತಿಯಿಂದ ಉಳ್ಳಾಲ ಮಾಸ್ತಿಕಟ್ಟೆಯಲ್ಲಿ ನಡೆದ ಕೇಂದ್ರ ಸರಕಾರದ ಆಡಳಿತ ನೀತಿಯನ್ನು ವಿರೋಧಿಸಿ ನಡೆದ ಜಾಗೃತಿ ಅಭಿಯಾನ ಮತ್ತು ಅಭಿನಂದನಾ ಸಭೆಯಲ್ಲಿ ಮಾತನಾಡಿದರು.
ಕೇರಳದ ಕಾಂಗ್ರೆಸ್‍ನ ಹಿರಿಯ ಮುಖಂಡ ಹರೀಶ್ ಬಾಬು ಮಾತನಾಡಿ, ದೇಶದ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರನ್ನು ಕಾವಲುಗಾರ ಎಂದು ಹೇಳಲು ಆಗುವುದಿಲ್ಲ. ನಾಲ್ಕುವರೆ ವರ್ಷದ ಆಡಳಿತದಲ್ಲಿ ಶೂನ್ಯ ಸಾಧನೆ ದಾಖಲು ಮಾಡಿದೆ. ಅವರ ಮೇಲೆ ಜನರಿಗೆ ವಿಶ್ವಾಸ ಇತ್ತು. ವಿಶ್ವಾಸದ ಮೆಲೆ ಆರಿಸಿದರೂ ಅವರು ಜನಪರ ಸೇವೆ ಮಾಡಿಲ್ಲ ಎಂದವರು ಟಿಪ್ಪುಸುಲ್ತಾನ್ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ನಾಯಕ. ಅವರು ದೇಶದ್ರೋಹಿ ಅಲ್ಲ. ಇಲ್ಲಿನ ಜನತೆಗೆ ಆ ಕಾಲದಲ್ಲಿ ಸಹಕಾರ ಮಾಡಿದ ಧೀರ ವ್ಯಕ್ತಿ ಅವರಾಗಿದ್ದಾರೆ. ದೇಶದ ಪ್ರಜೆಗಳ ಮೇಲೆ ಅಪಾರ ಕಾಳಜಿ ಅವರಲ್ಲಿತ್ತು. ಹಿಂದೂಗಳಿಗೆ ಬದುಕಲು ಆರೆಸ್ಸೆಸ್ ಬೇಕಾಗಿಲ್ಲ. ಮುಸ್ಲಿಮರಿಗೆ ಬದುಕಲು ಉಗ್ರ ಸಂಘಟನೆಗಳು ಬೇಕಿಲ್ಲ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ವಹಿಸಿದ್ದರು. ಈ ಸಂದರ್ಭ ಉಳ್ಳಾಲ ನಗರ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ವಿಜೇತರಾದ ಕೌನ್ಸಿಲರ್‍ಗಳನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಸದಾಶಿವ ಉಳ್ಳಾಲ್ ಕಣಚೂರು ಮೋನು, ಜಯರಾಜ್, ಜಿ.ಪಂ. ಸದಸ್ಯೆ ಮಮತಾಗಟ್ಟಿ, ತಾ.ಪಂ. ಅಧ್ಯಕ್ಷ ಮಹಮ್ಮದ್ ಮೋನು, ತಾ.ಪಂ. ಮಜಿ ಸದಸ್ಯ ಮುಸ್ತಫಾ ಹರೇಕಳ, ಉಳ್ಳಾಲ ನಗರಸಭೆ ಕೌನ್ಸಿಲರ್‍ಗಳಾದ ಮಹಮ್ಮದ್ ಮುಕಚೇರಿ, ಬಾಜಿಲ್ ಡಿಸೋಜ, ಮಾಜಿ ಕೌನ್ಸಿಲರ್ ದಿನೆಶ್ ರೈ, ಮುಸ್ತಫಾ, ನಗರಸಭೆ ಮಾಜಿ ಅಧ್ಯಕ್ಷ ಕುಂಞಿ ಮೋನು, ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಎನ್‍ಎಸ್ ಕರೀಂ, ಆಲ್ವಿನ್ ಪನೀರ್, ಇಲ್ಯಾಸ್, ರಮೇಶ್ ಶೆಟ್ಟಿ ಬೋಳಿಯಾರ್, ಯೂತ್ ಕಾಂಗ್ರೆಸ್‍ನ ನಾಸಿರ್ ಟಿ.ಎಸ್. ಸಾಮಣಿಗೆ, ರವೂಫ್ ದೇರಳಕಟ್ಟೆ, ಸಲೀಂ ಮೊದಲಾದವರು ಉಪಸ್ಥಿತರಿದ್ದರು.
ಯು.ಬಿ. ಸಲೀಂ ಉಳ್ಳಾಲ್ ಅತಿಥಿಗಳನ್ನು ಸ್ವಾಗತಿಸಿದರು. ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.