×
Ad

ವೇಣೂರು ಪೊಲೀಸರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಡಿವೈಎಫ್‌ಐ ನಿಯೋಗದಿಂದ ಎಸ್ಪಿಗೆ ಮನವಿ

Update: 2018-10-03 20:02 IST

ಮಂಗಳೂರು, ಅ.3: ಡಿವೈಎಫ್‌ಐ ಸಂಘಟನೆಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ರಿಯಾಝ್ ಮಾಂತೂರು ಮೇಲೆ ದೌರ್ಜನ್ಯ ನಡೆಸಿ, ಸುಳ್ಳು ಮೊಕದ್ದಮೆ ದಾಖಲಿಸಿದ ವೇಣೂರು ಪೊಲೀಸರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಡಿವೈಎಫ್‌ಐ ನಿಯೋಗವು ಎಸ್ಪಿ ರವಿಕಾಂತೇಗೌಡ ಅವರಿಗೆ ಬುಧವಾರ ಮನವಿ ಸಲ್ಲಿಸಿತು.

ರಿಯಾಝ್ ಮಾಂತೂರು (28) ಹಲವು ವರ್ಷಗಳಿಂದ ಡಿವೈಎಫ್‌ಐ ಸಂಘಟನೆಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ಮಂಗಳವಾರ ರಾತ್ರಿ ರಿಯಾಝ್ ಗಂಜಿಮಠದಲ್ಲಿರುವ ತನ್ನ ಅಂಗಡಿ ಮುಚ್ಚಿ ಬೆಳ್ತಂಗಡಿಯಲ್ಲಿರುವ ಪತ್ನಿಯ ಮನೆಗೆ ಸಹೋದರ ಇರ್ಷಾದ್ (18) ಜೊತೆಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ರಾತ್ರಿ ಸುಮಾರು 11 ಗಂಟೆಗೆ ವೇಣೂರು ಬಳಿ ಗಸ್ತಿನಲ್ಲಿದ್ದ ತಾರಾನಾಥ, ರಂಜಿತ್ ಸಹಿತ ಐದಾರು ಪೊಲೀಸರ ತಂಡ ತಡೆದಿದ್ದಾರೆ. ವಾಹನದ ದಾಖಲೆ ಕೇಳಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ರಿಯಾಝ್ ಮತ್ತವರ ಸಹೋದರನ ಬಳಿ ಚಾಲನಾ ಪರವಾಣಿಗೆ ಮಾತ್ರ ಇದ್ದು, ಅದನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ವಾಹನ ದಾಖಲೆಗಳು ಮನೆಯಲ್ಲಿದ್ದು ಬೆಳಗ್ಗೆ ಹಾಜರು ಪಡಿಸುವುದಾಗಿ ತಿಳಿಸಿದ್ದಾರೆ. ಅಷ್ಟಕ್ಕೆ ಪೊಲೀಸ್ ಸಿಬ್ಬಂದಿ ಅವಾಚ್ಯ ಪದಗಳನ್ನು ಬಳಸಿ ಜೋರು ಧ್ವನಿಯಲ್ಲಿ ನಿಂದಿಸಿದ್ದಾರೆ ಎಂದು ಮನವಿಯಲ್ಲಿ ದೂರಲಾಗಿದೆ.

ಅದೇ ಸಮಯದಲ್ಲಿ ಈ ಹಿಂದೆ ಬೆಳ್ತಂಗಡಿಯಲ್ಲಿ ವೃತ್ತ ನಿರೀಕ್ಷಕರಾಗಿದ್ದ ನಾಗೇಶ್ ಕದ್ರಿ ತನ್ನ ಮಡದಿಯ ಜೊತೆಗೆ ಖಾಸಗಿ ವಾಹನದಲ್ಲಿ ಅದೇ ದಾರಿಯಲ್ಲಿ ಬಂದಿದ್ದಾರೆ. ಪೊಲೀಸರಲ್ಲಿ ವಿಷಯ ಏನೆಂದು ವಿಚಾರಿಸಿದ್ದು, ಸ್ಥಳದಲ್ಲಿದ್ದ ಪೊಲೀಸರು ರಿಯಾಝ್ ಮತ್ತವರ ಸಹೋದರ ಪೊಲೀಸರನ್ನು ಜೋರು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಸಂದರ್ಭ ರಿಯಾಝ್, ನಾಗೇಶ್ ಕದ್ರಿಯವರ ಜೊತೆಗೆ ಪೊಲೀಸರು ಸುಳ್ಳು ಹೇಳುತ್ತಿದ್ದಾರೆ. ನಾವು ಆ ರೀತಿ ನಡೆದು ಕೊಂಡಿಲ್ಲ ಎಂದು ವಿಷಯ ಮನವರಿಕೆ ಮಾಡಿಕೊಡಲು ಯತ್ನಿಸಿದ್ದಾರೆ. ಅದಕ್ಕೆ ಆಸ್ಪದ ನೀಡದ ನಾಗೇಶ್ ಕದ್ರಿಯವರು, ‘ನನ್ನ ಸಿಬ್ಬಂದಿ ಏನು ಅಂತ ನನಗೆ ಗೊತ್ತು, ಬಾಯಿ ಮುಚ್ಚು ... ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ‘ಒದ್ದು ಒಳಗೆ ಹಾಕಿ, ಕೇಸು ಜಡಿಯಿರಿ’ ಎಂದು ಆದೇಶಿಸಿ ಸ್ಥಳದಿಂದ ತೆರಳಿದ್ದಾರೆ ಎಂಬುದಾಗಿ ಮನವಿಯಲ್ಲಿ ವಿವರಿಸಲಾಗಿದೆ.

ತಕ್ಷಣವೇ ರಿಯಾಝ್ ಮತ್ತು ಇರ್ಷಾದ್‌ನನ್ನು ಬಲವಂತವಾಗಿ ವಾಹನವೊಂದರಲ್ಲಿ ಕೂಡಿ ಹಾಕಿ ಹಲ್ಲೆಗೈದು ವೇಣೂರು ಠಾಣೆಗೆ ಕರೆದೊಯ್ದಿದ್ದಾರೆ. ಠಾಣೆಗೆ ತಲುಪಿದ ತಕ್ಷಣವೇ ತಾರಾನಾಥ, ರಂಜಿತ್ ಎಂಬ ಸಿಬ್ಬಂದಿ ಈ ಇಬ್ಬರು ಪೊಲೀಸರ ಮೇಲೆ ಕೈ ಮಾಡಿದ್ದಾರೆ ಎಂದು ಠಾಣೆಯಲ್ಲಿದ್ದ ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿದ್ದು, ನಂತರ ಒಟ್ಟು ಹತ್ತರಷ್ಟು ಪೊಲೀಸರು ಲಾಕಪ್ ನಲ್ಲಿ ಕೂಡಿ ಹಾಕಿ ಲಾಠಿಯಲ್ಲಿ ಸಾಮೂಹಿಕವಾಗಿ ಥಳಿಸಿದ್ದಾರೆ, ಕಾಲಲ್ಲಿ ತುಳಿದಿದ್ದಾರೆ ಎಂದು ದೂರಲಾಗಿದೆ.

ತಾರಾನಾಥ, ರಂಜಿತ್ ಎಂಬ ಸಿಬ್ಬಂದಿ ‘ಬ್ಯಾರಿಗಳು ಕಳ್ಳರು, ಉಗ್ರಗಾಮಿಗಳ ತರ ಕಾಣುತ್ತೀರಿ’ ಎಂದು ಜಾತಿ ನಿಂದನೆಗೈದು ಅವಮಾನಿಸಿದ್ದಾರೆ. ಮೊಬೈಲ್‌ಗಳನ್ನು ಕಿತ್ತು ಒಡೆದು ಹಾಕಿದ್ದಾರೆ. ನಂತರ ಠಾಣಾಧಿಕಾರಿಗಳು ಠಾಣೆಗೆ ಆಗಮಿಸಿದ್ದಾರೆ. ಅಷ್ಟು ಹೊತ್ತಿಗೆ ರಿಯಾಝ್ ಕುಟುಂಬಸ್ಥರು ಸಹ ಸ್ಥಳಕ್ಕೆ ಬಂದಿದ್ದು, ಮೊದಲು ಗಾಂಜಾ ಕೇಸು, ತಲವಾರು ಹೊಂದಿದ ಕೇಸು ಜಡಿಯುವುದಾಗಿ ತಿಳಿಸಿ ಕೊನೆಗೆ ಯಾವುದೋ ಸುಳ್ಳು ಆರೋಪಗಳ ಅಡಿ ಕೇಸು ಹಾಕಿದ್ದಾರೆ. ಪೊಲೀಸರ ದೌರ್ಜನ್ಯಗಳನ್ನು ಬಾಯಿ ಬಿಡಬಾರದು ಎಂಬ ಶರತ್ತಿನೊಂದಿಗೆ ಬೆಳಗ್ಗಿನ ಜಾವ ಮೂರು ಗಂಟೆಗೆ ಠಾಣಾ ಜಾಮೀನಿನ ಅಡಿ ಬಿಡುಗಡೆಗೊಳಿಸಿರುವುದಾಗಿ ಮನವಿಯಲ್ಲಿ ತಿಳಿಸಲಾಗಿದೆ.

ವೇಣೂರು ಪೊಲೀಸರ ಹಾಗೂ ಇನ್‌ಸ್ಪೆಕ್ಟರ್ ನಾಗೇಶ್ ಕದ್ರಿಯವರ ಈ ನಡೆ ಆಘಾತಕಾರಿಯಾಗಿದೆ. ಜನತೆಗೆ ಪೊಲೀಸರ ಮೇಲಿನ ನಂಬಿಕೆಗೆ ಚ್ಯುತಿ ತರುವಂತಿದೆ. ರಿಯಾಝ್, ಇರ್ಷಾದ್ ಮತ್ತವರ ಕುಟುಂಬ ಈ ಘಟನೆಯಿಂದ ಬೆದರಿದೆ. ಮಾನಸಿಕ ಆಘಾತಕ್ಕೆ ಒಳಗಾಗಿದ್ದಾರೆ. ಸಾಮಾಜಿಕವಾಗಿಯೂ ಪೊಲೀಸರ ಈ ನಡವಳಿಕೆ ವ್ಯತಿರಿಕ್ತ ಪರಿಣಾಮಗಳಿಗೆ ಕಾರಣವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈ ಘಟನೆಯ ಕುರಿತು ಮಧ್ಯ ಪ್ರವೇಶಿಸಬೇಕು. ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥ ಪೊಲೀಸರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಎಂದು ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮನವಿಯಲ್ಲಿ ಒತ್ತಾಯಿಸಿದರು.

ಮನವಿ ಸಲ್ಲಿಸುವ ನಿಯೋಗದಲ್ಲಿ ಡಿವೈಎಫ್‌ಐ ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ, ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಜಿಲ್ಲಾ ಮುಖಂಡರಾದ ರಫೀಕ್ ಹರೇಕಳ, ನವೀನ್ ಕೊಂಚಾಡಿ, ಮನೋಜ್ ವಾಮಂಜೂರು, ನೌಷದ್ ಬೆಂಗ್ರೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News