×
Ad

ಅ.15ರೊಳಗೆ ಮರಳು ತೆಗೆಯಲು ಅನುಮತಿ: ಸಚಿವೆ ಜಯಮಾಲ

Update: 2018-10-03 20:57 IST

ಉಡುಪಿ, ಅ. 3: ಜಿಲ್ಲೆಯಲ್ಲಿ ಉದ್ಭವಿಸಿರುವ ಮರಳು ಸಮಸ್ಯೆಯನ್ನು ಬಗೆಹರಿಸಲು ನಾನ್ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಕೂಡಲೇ ಬ್ಲಾಕ್‌ಗಳನ್ನು ಗುರುತಿಸಿ ಅ.15ರೊಳಗೆ ಮರಳು ತೆಗೆಯಲು ಅನುಮತಿ ನೀಡುವ ಬಗ್ಗೆ ಮಣಿಪಾಲದಲ್ಲಿರುವ ಜಿಪಂ ಸಭಾಂಗಣದಲ್ಲಿ ಇಂದು ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಯಿತು.

ಸಭೆಯ ಮುಕ್ತಾಯದ ಬಳಿಕ ಕರೆದ ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ಅವರು ಈ ವಿಷಯ ತಿಳಿಸಿ, ಸಭೆಯ ಕಲಾಪಗಳ ಕುರಿತು ಮಾಹಿತಿ ನೀಡಿದರು. ಈಗಾಗಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೂ ಸಹ ಅ.15ರೊಳಗೆ ಸಾಂಪ್ರದಾಯಿಕ ರೀತಿಯಲ್ಲಿ ಮರಳು ತೆಗೆಯಲು ಅವಕಾಶ ನೀಡುವ ಆಶ್ವಾಸನೆಯನ್ನು ಕರಾವಳಿಯ ಜನಪ್ರತಿನಿಧಿಗಳಿಗೆ ಬೆಂಗಳೂರಿನಲ್ಲಿ ನೀಡಿದ್ದರು ಎಂದರು.

ಸಿಆರ್‌ಝಡ್ ವ್ಯಾಪ್ತಿಗೆ ಸಂಬಂಧಿಸಿದಂತೆ ಮರಳು ದಿಬ್ಬಗಳನ್ನು ಗುರುತಿಸಿ ವರದಿ ನೀಡುವಂತೆ ಈಗಾಗಲೇ ಸುರತ್ಕಲ್‌ನ ಎನ್‌ಐಟಿಕೆಗೆ ಸೂಚಿಸಲಾಗಿದ್ದು, ಅವರಿಂದ ವರದಿ ಬಂದ ನಂತರ ಅದನ್ನು ಮುಂದಿನ ಕ್ರಮಕ್ಕೆ ಕಳುಹಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಪಡಿತರ ಚೀಟಿಗಾಗಿ 7598 ಅರ್ಜಿಗಳು ವಿಲೇವಾರಿಗೆ ಬಾಕಿ ಇದ್ದು, ಇವುಗಳನ್ನು ಈ ತಿಂಗಳ ಕೊನೆಯೊಳಗೆ ಇತ್ಯರ್ಥ ಪಡಿಸಿ ಪಡಿತರ ಚೀಟಿ ನೀಡುವಂತೆ ಸೂಚಿಸಲಾಗಿದೆ. ಅದೇ ರೀತಿ ಜಿಲ್ಲೆಯಲ್ಲಿ ಬಾಕಿ ಇರುವ 36 ಶಾಲಾ ಕಟ್ಟಡಗಳನ್ನು ಸಹ ಈ ತಿಂಗಳ ಕೊನೆಯೊಳಗೆ ಮುಗಿಸಲು ಕ್ರಮ ತೆಗೆದು ಕೊಳ್ಳುವಂತೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಲಾಗಿದ್ದು, ಅಫಘಾತ ವಲಯಗಳಲ್ಲಿ ಸೂಕ್ತ ಕ್ರಮಕ್ಕೆ ಹಾಗೂ ರಾ.ಹೆದ್ದಾರಿಯ ಸರ್ವಿಸ್ ರಸ್ತೆಗಳನ್ನು ಸಂಚಾರಕ್ಕೆ ಸುಗಮಗೊಳಿಸಲು ಸಹ ಸಂಬಂಧಿತರಿಗೆ ಸೂಚಿಸಲಾಗಿದೆ. ಉಡುಪಿ ಕರಾವಳಿ ಬೈಪಾಸ್‌ನ ಕಾಮಗಾರಿಯನ್ನು ಡಿಸೆಂಬರ್ ಒಳಗೆ ಹಾಗೂ ಎನ್‌ಎಚ್-66ರ ಸಂಪೂರ್ಣ ಕಾಮಗಾರಿಯನ್ನು 2019ರ ಮಾರ್ಚ್ ಕೊನೆಯೊಳಗೆ ಮುಕ್ತಾಯಗೊಳಿಸುವು ದಾಗಿ ಹೆದ್ದಾರಿ ಪ್ರಾಧಿಕಾರ ಭರವಸೆ ನೀಡಿದೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ತಿಳಿಸಿದರು.

ಮೊಬೈಲ್ ಅಂಗನವಾಡಿ:  ಜಿಲ್ಲೆಯಲ್ಲಿರುವ ಅಂಬೇಡ್ಕರ್ ಭವನಗಳ ಜಾಗವನ್ನು ಗುರುತಿಸಿ ಇಲಾಖೆಗೆ ಹಸ್ತಾಂತರಿಸಲು ತಿಳಿಸಲಾಗಿದೆ. ಜಿಲ್ಲೆಯಲ್ಲಿರುವ ವಲಸೆ ಕಾರ್ಮಿಕರು ಹಾಗೂ ಕಟ್ಟಡ ಕಾರ್ಮಿಕರ ಮಕ್ಕಳಿಗಾಗಿ ಮೊಬೈಲ್ ಅಂಗನವಾಡಿಗಳನ್ನು ತೆರೆಯಲು ತಿಳಿಸಲಾಗಿದೆ. ರಾಜ್ಯದಲ್ಲಿ ಈಗಾ ಗಲೇ 100 ಮೊಬೈಲ್ ಅಂಗನವಾಡಿಗಳನ್ನು ಮಂಜೂರುಗೊಳಿಸಲಾಗಿದ್ದು, ಇವುಗಳಲ್ಲಿ ಐದನ್ನು ವಿಧಾನಸಭಾ ಕ್ಷೇತ್ರಕ್ಕೊಂದರಂತೆ ಉಡುಪಿ ಜಿಲ್ಲೆಗೆ ಮಂಜೂರು ಮಾಡಲಾಗುವುದು ಎಂದು ಜಯಮಾಲ ನುಡಿದರು.

ಅದೇ ರೀತಿ ವಲಸೆ ಕಾರ್ಮಿಕರು ಹಾಗೂ ಕಟ್ಟಡ ಕಾರ್ಮಿಕರಿಗೂ ಸೂಕ್ತ ಮೂಲಭೂತ ಸೌಕರ್ಯಗಳನ್ನು ಒದಗಿಸಲು ತಿಳಿಸಲಾಗಿದೆ. ಜಿಲ್ಲಾ ಮಹಿಳಾ ಒಕ್ಕೂಟಕ್ಕೆ ಜಮೀನು ಮಂಜೂರುಗೊಳಿಸಲು ತಿಳಿಸಲಾಗಿದೆ. ಜಿಲ್ಲೆಯಲ್ಲಿ ಸರ್ವೆಯರ್‌ಗಳ ಕೊರತೆ ಇದ್ದು, ತಿಂಗಳ ಕೊನೆಯೊಳಗೆ ಹೊಸ ಸರ್ವೆಯರ್‌ಗಳ ನೇಮಕಾತಿ ಆದಾಗ ಖಾಲಿ ಜಾಗ ತುಂಬಿಸಿ, ಸರ್ವೆ ಕಾರ್ಯ ನಡೆಸಲು ತಿಳಿಸಲಾಗಿದೆ ಎಂದು ಸಚಿವೆ ತಿಳಿಸಿದರು.

3364 ಮನೆಗಳಿಗೆ ವಿದ್ಯುತ್: ಜಿಲ್ಲೆಯಲ್ಲಿ ವಿದ್ಯುತ್ ಸಂಪರ್ಕವಿಲ್ಲದ 3364 ಮನೆಗಳನ್ನು ಗುರುತಿಸಲಾಗಿದ್ದು, ಇವುಗಳಿಗೆ ಶೀಘ್ರವೇ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಸೂಚಿಸಲಾಗಿದೆ. ಉಳಿದ ಹಲವು ಇಲಾಖೆಗಳ ಕುರಿತಂತೆಯೂ ಚರ್ಚೆಗಳು ನಡೆದವು ಎಂದು ಅವರು ತಿಳಿಸಿದರು.

ಉಡುಪಿಯಲ್ಲಿ ರಂಗಭೂಮಿ ಹಾಗೂ ರಂಗಾಯಣಕ್ಕಾಗಿ ಒಂದು ಎಕರೆ ಜಾಗವನ್ನು ಆದಿಉಡುಪಿಯಲ್ಲಿ ಗುರುತಿಸಲಾಗಿದೆ. ಈ ಎರಡರ ನಿರ್ಮಾಣಕ್ಕೆ ಹಣಕಾಸಿನ ಯಾವುದೇ ಸಮಸ್ಯೆ ಎದುರಾಗದು. ಎಷ್ಟು ಬೇಕೊ ಅಷ್ಟು ಹಣವನ್ನು ಮಂಜೂರು ಮಾಡುವುದಾಗಿ ಜಯಮಾಲ ತಿಳಿಸಿದರು.

ಸಭೆಯಲ್ಲಿ ವಿಧಾನಪರಿಷತ್‌ನಲ್ಲಿ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುನಿಲ್ ಕುಮಾರ್, ಲಾಲಾಜಿ ಮೆಂಡನ್, ಪ್ರತಾಪ್‌ಚಂದ್ರ ಶೆಟ್ಟಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಹೇಶ್ವರ ರಾವ್, ಜಿಪಂ ಅದ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಡಿಸಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಸಿಇಓ ಶಿವಾನಂದ ಕಾಪಸಿ, ಎಸ್ಪಿ ಲಕ್ಷ್ಮಣ ನಿಂಬರಗಿ ಉಪಸ್ಥಿತರಿದ್ದರು.

ಪ್ರಾಕೃತಿಕ ವಿಕೋಪಕ್ಕೆ 14.54 ಕೋಟಿ ಬಿಡುಗಡೆ

ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪದಿಂದಾಗಿ ಒಟ್ಟು 140 ಕೋಟಿ ರೂ.ಹಾನಿಯ ವರದಿಯನ್ನು ಜಿಲ್ಲಾಡಳಿತ ರಾಜ್ಯ ಸರಕಾರಕ್ಕೆ ಕಳುಹಿಸಿದೆ. ರಾಜ್ಯ ಸರಕಾರ ಈಗಾಗಲೇ ಜಿಲ್ಲೆಗೆ 14.54 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ ಎಂದು ಸಚಿವೆ, ಇವುಗಳಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಗೆ 3.75 ಕೋಟಿ ರೂ., ಲೋಕೋಪಯೋಗಿ ಇಲಾಖೆಗೆ 8.63ಕೋಟಿ ರೂ., ನಗರಾಭಿವೃದ್ಧಿ ಇಲಾಖೆಗೆ 1.17ಕೋಟಿ ರೂ. ಹಾಗೂ ಸಣ್ಣ ನೀರಾವರಿ ಇಲಾಖೆಗೆ 94 ಲಕ್ಷ ರೂ.ಗಳನ್ನು ಹಂಚಿಕೆ ಮಾಡಲಾಗಿದೆ ಎಂದರು.

ಎರಡನೇ ಹಂತದಲ್ಲಿ ಜಿಲ್ಲೆಯ 7,600 ಹೆಕ್ಟೇರ್ ಪ್ರದೇಶದಲ್ಲಿ ಕೊಳೆರೋಗ ವನ್ನು ಗುರುತಿಸಲಾಗಿದೆ. ಆದ ಹಾನಿಗಳಿಗೆ ಪ್ರಸ್ತಾಪವನ್ನು ರಾಜ್ಯ ಸರಕಾರಕ್ಕೆ ಕಳುಹಿಸಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾಹಿತಿ ನೀಡಿದರು.

ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಪುನರರಾಂಭದ ವಿಷಯವೂ ಇಂದು ಚರ್ಚೆಗೆ ಬಂದಿದ್ದು, ಕಬ್ಬು ಬೆಳೆಯುವ ರೈತರ ಸಭೆಯೊಂದನ್ನು ಕರೆದು ಮಾತುಕತೆ ನಡೆಸಿ ಅವರ ಅಭಿಪ್ರಾಯಗಳನ್ನು ಪಡೆದು ಮುಂದಿನ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಲಾಯಿತು ಎಂದರು.

ಕೆಇಆರ್‌ಐಯಿಂದ ವರದಿ

ಈ ಬಾರಿ ಸೆಪ್ಟೆಂಬರ್ ತಿಂಗಳಲ್ಲೇ ಜಿಲ್ಲೆಯಲ್ಲಿ ಹರಿಯುವ ನದಿಗಳ ನೀರು ಹಠಾತ್ತನೆ ಬತ್ತಿರುವ ಕುರಿತು ಕರ್ನಾಟಕ ಇಂಜಿನಿಯರಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ಗೆ ಮಾಹಿತಿ ನೀಡಲಾಗಿದ್ದು, ಅವರಿಂದ ವರದಿಯನ್ನು ಕೇಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ನದಿಗಳಲ್ಲಿ ನೀರಿನ ಹರಿಯುವಿಕೆ ತಗ್ಗಿರುವುದರಿಂದ ಕಿಂಡಿ ಅಣೆಕಟ್ಟಿನ ಹಲಗೆಗಳನ್ನು ಹಾಕಲು ಸೂಚನೆಗಳನ್ನು ನೀಡಲಾಗಿದೆ. ನೀರಿನ ಹರಿಯುವಿಕೆ ಇರುವಲ್ಲಿ ಹಲಗೆಗಳನ್ನು ರಿಪೇರಿ ಮಾಡಿ ಸಿದ್ಧಪಡಿಸಿಟ್ಟುಕೊಂಡು ಹರಿಯುವಿಕೆ ನಿಲ್ಲುತ್ತಿರುವಂತೆ ನವೆಂಬರ್-ಡಿಸೆಂಬರ್ ತಿಂಳಲ್ಲಿ ಹಾಕಲು ತಿಳಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News