ಹುಲಿ ಬೇಟೆಯ ವೇಳೆ ಆನೆ ರಾದ್ಧಾಂತ: ಮಹಿಳೆ ಸಾವು

Update: 2018-10-03 15:47 GMT
ಸಾಂದರ್ಭಿಕ ಚಿತ್ರ

ನಾಗಪುರ, ಅ.3: ಮಹಾರಾಷ್ಟ್ರದ ಯವತ್ಮಲ್‌ನಲ್ಲಿ ಹೆಣ್ಣು ಹುಲಿ ಮತ್ತು ಅದರ ಎರಡು ಮರಿಗಳನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ಬಳಸಲಾಗುತ್ತಿದ್ದ ಆನೆಯೊಂದು ಶಿಬಿರದಿಂದ ತಪ್ಪಿಸಿಕೊಂಡು ದಾಂಧಲೆ ನಡೆಸಿದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬುಧವಾರ ನಡೆದಿದೆ. ಗಜರಾಜ ಹೆಸರಿನ ಆನೆಯನ್ನು ತಡೊಬ-ಅಂಧರಿ ಹುಲಿ ಸಂರಕ್ಷಣಾ ವಲಯದಿಂದ ಕರೆಸಿಕೊಳ್ಳಲಾಗಿತ್ತು. ಕಳೆದ ಹತ್ತು ದಿನಗಳಿಂದ ಇತರ ನಾಲ್ಕು ಆನೆಗಳ ಜೊತೆಗೆ ಈ ಆನೆಯನ್ನು ಸ್ಥಳೀಯವಾಗಿ ಆತಂಕ ಸೃಷ್ಟಿಸಿದ್ದ ಹುಲಿಯನ್ನು ಹುಡುಕುವ ಕಾರ್ಯಾಚರಣೆಗೆ ಬಳಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬುಧವಾರ ತನ್ನ ಶಿಬಿರದಿಂದ ತಪ್ಪಿಸಿಕೊಂಡ ಆನೆ 20ಕಿ.ಮೀ. ದೂರದವರೆಗೆ ಓಡಿದೆ. ಈ ವೇಳೆ ಪ್ರಕೃತಿ ಕರೆಯಲ್ಲಿ ನಿರತರಾಗಿದ್ದ 35ರ ಹರೆಯದ ಅರ್ಚನಾ ಕುಡ್ಸಂಗೆಯನ್ನು ಈ ಆನೆ ಕೊಂದು ಹಾಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಮಾರ್ಚ್‌ನಲ್ಲಿ ಇದೇ ಆನೆ ಇದೇ ಮಾದರಿಯಲ್ಲಿ ತನ್ನ ಶಿಬಿರದಿಂದ ತಪ್ಪಿಕೊಂಡು ಓರ್ವ ವ್ಯಕ್ತಿಯನ್ನು ಗಾಯಗೊಳಿಸಿತ್ತು. ಆದರೂ ಈ ಆನೆಯನ್ನು ಮತ್ತೆ ಕಾರ್ಯಾಚರಣೆಯಲ್ಲಿ ತೊಡಗಿಸಿರುವುದು ಹಲವು ಪ್ರಶ್ನೆಗಳನ್ನು ಸೃಷ್ಟಿಸಿದೆ. ಆನೆಯು ಶಿಬಿರದಿಂದ ಹೇಗೆ ತಪ್ಪಿಸಿಕೊಂಡಿತು ಎಂಬ ಬಗ್ಗೆ ತನಿಖೆ ನಡೆಸಲಾಗುವುದು. ಆದರೆ ಈ ಘಟನೆಯಿಂದ ಇಡೀ ಕಾರ್ಯಾಚರಣೆಗೆ ಹಿನ್ನಡೆಯುಂಟಾಗಿದೆ. ಇನ್ನು ಸಂಪೂರ್ಣ ರಣತಂತ್ರವನ್ನು ಪುನಃ ರೂಪಿಸಬೇಕಾಗಿದೆ ಎಂದು ಅರಣ್ಯ ಮುಖ್ಯಾಧಿಕಾರಿ ಎ.ಕೆ.ಮಿಶ್ರಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News