×
Ad

ಗಂಟಾಲ್‌ಕಟ್ಟೆ ಯುವಕನ ಕೊಲೆಯತ್ನ ಪ್ರಕರಣ: ಮೂವರು ಆರೋಪಿಗಳು ಸೆರೆ

Update: 2018-10-03 22:08 IST

ಮಂಗಳೂರು, ಅ.3: ಗಂಟಾಲ್‌ಕಟ್ಟೆ ಯುವಕನ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿದ್ದಾರೆ.

ತಾಲೂಕಿನ ತೋಕೂರು ಕೋಡಿಕೆರೆ ನಿವಾಸಿ ಧನರಾಜ್ ಪೂಜಾರಿ ಯಾನೆ ಧನು (25), ಹಳೆಯಂಗಡಿಯ ಶಶಿಹಿತ್ಲು ನಿವಾಸಿ ದಿನೇಶ ಪೂಜಾರಿ (38), ಸುರತ್ಕಲ್‌ನ ಹೊನ್ನಕಟ್ಟೆ ಕುಳಾಯಿ ನಿವಾಸಿ ಶಾಶ್ವತ್ ಶೆಟ್ಟಿ ಯಾನೆ ಶಾಶ್ವತ್ (23) ಬಂಧಿತ ಆರೋಪಿಗಳು. ಇನ್ನುಳಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಘಟನೆ ವಿವರ

ಸೆ. 24ರಂದು ಕರಿಂಜೆ ಗ್ರಾಮದ ಗಂಟಾಲ್‌ಕಟ್ಟೆ ನಿವಾಸಿ ಮುಹಮ್ಮದ್ ಇಮ್ತಿಯಾಝ್ (32) ಎಂಬವರು ಮಸೀದಿಯ ಕಟ್ಟಡದಲ್ಲಿ ಕ್ಯಾಂಟೀನ್ ನಡೆಸುತ್ತಿದ್ದು, ಎಂದಿನಂತೆ ಸೋಮವಾರ ಬೆಳಗ್ಗೆ ಅವರು ಹೊಟೇಲ್‌ನಲ್ಲಿದ್ದ ಸಂದರ್ಭ ಹೊಸಂಗಡಿ ಕಡೆಯಿಂದ ಕಾರಿನಲ್ಲಿ ಬಂದ ನಾಲ್ಕೈದು ಮಂದಿಯ ತಂಡ ಮಾರಕಾ ಯುಧಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು.

ಇಮ್ತಿಯಾಝ್‌ರ ತಲೆ, ಕೈ ಹಾಗೂ ಬೆನ್ನಿಗೆ ಗಂಭೀರ ಗಾಯಗಳಾಗಿದ್ದವು. ಗಂಭೀರವಾಗಿ ಗಾಯಗೊಂಡಿದ್ದ ಇಮ್ತಿಯಾಝ್ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.

ಇಮ್ತಿಯಾಝ್ ಮೇಲೆ ನಡೆದ ದಾಳಿಯನ್ನು ತಡೆಯಲು ಯತ್ನಿಸಿದ ಹೊಟೇಲ್ ಸಿಬ್ಬಂದಿ ಇಬ್ರಾಹೀಂ (23) ಮೇಲೂ ತಂಡ ದಾಳಿ ನಡೆಸಿತ್ತು. ಇದರಿಂದ ಅವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದವು. ಈ ಸಂಬಂಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪತ್ತೆ ಕಾರ್ಯಕ್ಕೆ ಮೂರು ತಂಡ ರಚನೆ

ಈ ಪ್ರಕರಣದ ಆರೋಪಿಗಳ ಪತ್ತೆ ಕಾರ್ಯಕ್ಕೆ ಮೂರು ತಂಡಗಳನ್ನು ರಚಿಸಿಸಲಾಗಿತ್ತು. ಇದರಲ್ಲಿ ಮೂಡುಬಿದಿರೆ ಪೊಲೀಸರು, ಮಂಗಳೂರು ಸಿಸಿಬಿ ಮತ್ತು ಮಂಗಳೂರು ನಗರ ಉತ್ತರ ಉಪವಿಭಾಗ ಪಣಂಬೂರು ರೌಡಿ ನಿಗ್ರಹ ದಳದವರು ಆರೋಪಿಗಳ ಪತ್ತೆಗೆ ಶ್ರಮಿಸಿದ್ದಾರೆ.

ಹಲವು ಪ್ರಕರಣ

ಆರೋಪಿ ಧನರಾಜ್ ಯಾನೆ ಧನು ಎಂಬಾತನ ವಿರುದ್ಧ ಉಡುಪಿ ಜಿಲ್ಲೆಯ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲೆ ಕೊಲೆಯತ್ನ ಪ್ರಕರಣ ಮತ್ತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವಾಟ್ಸ್‌ಆ್ಯಪ್‌ನಲ್ಲಿ ಅವಹೇಳಕಾರಿ ಪೋಸ್ಟ್ ಬಗ್ಗೆ ಪ್ರಕರಣ ದಾಖಲಾಗಿವೆ. ಆರೋಪಿ ದಿನೇಶ್ ಪೂಜಾರಿ ಯಾನೆ ದಿನ್ನು ವಿರುದ್ಧ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ.

ಈ ಪ್ರಕರಣದಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್ ಸುರೇಶ್ ಆದೇಶದಂತೆ ಉಪಪೊಲೀಸ್ ಆಯುಕ್ತೆ ಉಮಾ ಪ್ರಶಾಂತ ನಿರ್ದೇಶನದಂತೆ ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ರಾಜೇಂದ್ರ ಡಿ.ಎಸ್. ಮಾರ್ಗದರ್ಶನದಂತೆ ಪಣಂಬೂರು ರೌಡಿ ನಿಗ್ರಹದಳದ ಪೊಲೀಸ್ ನಿರೀಕ್ಷಕ ರಫೀಕ್ ಮತ್ತು ಮುಲ್ಕಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಅನಂತ ಪದ್ಮನಾಭ ಹಾಗೂ ಸಿಬ್ಬಂದಿ, ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕ ಶಾಂತರಾಮ ಹಾಗೂ ಅವರ ಸಿಬ್ಬಂದಿ ಹಾಗೂ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ರಾಮಚಂದ್ರ ಕೆ. ನಾಯಕ್ ಮತ್ತು ರೌಡಿ ನಿಗ್ರಹ ದಳದ ಅಧಿಕಾರಿ ಸಿಬ್ಬಂ ಎಎಸ್ಸೈ ಮುಹಮ್ಮದ್, ಕುಶಲ ಮಣಿಯಾಣಿ, ಸತೀಶ್ ಎಂ. ವಿಜಯ ಕಾಂಚನ್, ಇಸಾಕ್ ಅಹ್ಮದ್, ರಾಧಾಕೃಷ್ಣ, ಶರಣ್ ಕಾಳಿ, ಶೈಲೇಂದ್ರ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News