ಸೂರಲ್ಪಾಡಿ ಬಸ್ ಏಜೆಂಟ್ ಕೊಲೆಯತ್ನ ಪ್ರಕರಣ: ಮೂವರು ಸೆರೆ
Update: 2018-10-03 22:13 IST
ಮಂಗಳೂರು, ಅ.3: ಗುರುಪುರ ಸೂರಲ್ಪಾಡಿ ಬಸ್ ಏಜೆಂಟ್ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕಿನ ಅಮ್ಮುಂಜೆ ನಿವಾಸಿ ಶರೀಫ್ (24), ಬಜ್ಪೆಯ ಕಂದಾವರ ನಿವಾಸಿಗಳಾದ ಶಿಫಾಝ್ (21), ಆರಿಫ್ (28) ಬಂಧಿತ ಆರೋಪಿಗಳು.
ಪ್ರಕರಣ: ಸೆ. 24ರಂದು ನಗರದ ಹೊರವಲಯ ಬಜ್ಪೆ ಕೈಕಂಬ ನಿವಾಸಿ ಹರೀಶ್ ಶೆಟ್ಟಿ ಎಂಬವರು ಕೈಕಂಬದಿಂದ ತನ್ನ ಕೆಲಸ ಮುಗಿಸಿ ರಾತ್ರಿ ಮನೆಗೆ ತೆರಳುತಿದ್ದದ್ದು, ಈ ವೇಳೆ ಸೂರಲ್ಪಾಡಿ ಬಳಿಯಲ್ಲಿ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಹರೀಶ್ ಶೆಟ್ಟಿ ಅವರಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಈ ಕುರಿತು ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳ ಪತ್ತೆ ಕಾರ್ಯಕ್ಕೆ ಮೂರು ತಂಡಗಳನ್ನು ರಚಿಸಲಾಗಿತ್ತು. ಇದರಲ್ಲಿ ಬಜ್ಪೆ ಪೊಲೀಸರು, ಮಂಗಳೂರು ಸಿಸಿಬಿ ಮತ್ತು ಮಂಗಳೂರು ನಗರ ಉತ್ತರ ಉಪವಿಭಾಗ ಪಣಂಬೂರು ರೌಡಿ ನಿಗ್ರಹ ದಳದವರು ಆರೋಪಿಗಳ ಪತ್ತೆಗೆ ಶ್ರಮಿಸಿದ್ದಾರೆ.