ಮಲ್ಲೂರು: 'ಟಿ ಆರ್ ಎಫ್' ವತಿಯಿಂದ ಟೈಲರಿಂಗ್ ಸೆಂಟರ್ ಶುಭಾರಂಭ
ಮಂಗಳೂರು, ಅ. 4: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಬದ್ರಿಯಾ ಜುಮಾ ಮಸೀದಿ ಮಲ್ಲೂರು, ದೆಮ್ಮೆಲೆ ಇವರ ಸಹಯೋಗದಲ್ಲಿ ಮಹಿಳೆಯರಿಗೆ ಉಚಿತ ಟೈಲರಿಂಗ್ ಸೆಂಟರ್ ಉದ್ಘಾಟನಾ ಸಮಾರಂಭವು ನೂರುಲ್ ಉಲೂಂ ಮದ್ರಸ ಮಲ್ಲೂರು, ದೆಮ್ಮೆಲೆಯಲ್ಲಿ ಜರುಗಿತು.
ಮಂಗಳೂರು ತಾಲೂಕು ಪಂಚಾಯತ್ ಸದಸ್ಯೆ ಹಪ್ಸತ್ ಉದ್ಘಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿದ್ದ ಬರಕಾ ಇಂಟರ್ ನ್ಯಾಷನಲ್ ಸ್ಕೂಲ್ ಪ್ರಾಂಶುಪಾಲೆ ಸುಮಯ್ಯ ಮಾತನಾಡಿ ನಮ್ಮಲ್ಲಿರುವ ಪ್ರತಿಭೆ ಮತ್ತು ಕೌಶಲ್ಯವನ್ನು ಅಭಿವೃದ್ಧಿಪಡಿಸುವ ಮೂಲಕ ನಮ್ಮ ಬೆಳವಣಿಗೆಯ ಜೊತೆಗೆ ಕುಟುಂಬಕ್ಕೂ ಆಸರೆಯಾಗಬಹುದು. ನಾವು ಯಾವುದೇ ವೃತ್ತಿಯನ್ನು ಕೈಗೊಂಡರೂ ತಾಯಿಯೆಂಬ ಮಹತ್ತರ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಬೇಕು ಎಂದರು.
ಆಸರೆ ವಿಮೆನ್ಸ್ ಫೌಂಡೇಶನ್ ಅಧ್ಯಕ್ಷೆ ಸಲ್ಮಾ ಉಮರ್, ಸದಸ್ಯೆ ಆಸಿಯಾ ಮುಹಮ್ಮದ್, ಟೈಲರಿಂಗ್ ಶಿಕ್ಷಕಿ ಪವಿತ್ರಾ ಮೊದಲಾದವರು ಭಾಗವಹಿಸಿದ್ದರು. ಆಸರೆ ವಿಮೆನ್ಸ್ ಫೌಂಡೇಶನ್‍ನ ಸದಸ್ಯೆ ಮುಮ್ತಾಝ್ ಹಕೀಂ ಖಿರಾಅತ್ ಪಠಿಸಿದರು. ಆಸರೆ ಉಪಾಧ್ಯಕ್ಷೆ ಆತಿಕಾ ರಫೀಕ್ ಸ್ವಾಗತಿಸಿ ಪ್ರಸ್ತಾವನೆಗೈದರು.
ಟ್ಯಾಲೆಂಟ್ ಗ್ರಾಜುವೇಟ್ ಅಸೋಸಿಯೇಷನ್‍ನ ಅಧ್ಯಕ್ಷೆ ಮುನೀಝಾ ವಂದಿಸಿದರು. ಆಸರೆಯ ಪ್ರಧಾನ ಕಾರ್ಯದರ್ಶಿ ಮುಮ್ತಾಝ್ ಪಕ್ಕಲಡ್ಕ ಕಾರ್ಯಕ್ರಮ ನಿರೂಪಿಸಿದರು.
ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ನಿರುದ್ಯೋಗಿ ಮಹಿಳೆಯರಿಗೆ ಸ್ವ ಉದ್ಯೋಗಾವಕಾಶ ಕಲ್ಪಿಸಲು ಜಿಲ್ಲೆಯ ವಿವಿಧೆಡೆ ಟೈಲರಿಂಗ್ ಸೆಂಟರ್ ಗಳನ್ನು ಸ್ಥಳೀಯ ಸಂಸ್ಥೆಗಳ ಸಹಕಾರದಲ್ಲಿ ತೆರೆದು ಉಚಿತವಾಗಿ ತರಬೇತಿಯನ್ನು ನೀಡುತ್ತಿದೆ. ಅಡ್ಯಾರ್ ಕಣ್ಣೂರು, ನಂದಾವರ, ಕೃಷ್ಣಾಪುರ ಜನತಾ ಕಾಲನಿ, ಕೋಲ್ಪೆ, ತೌಡುಗೋಳಿ, ಮಲಾರ್, ಬೋಳಿಯಾರ್, ಬೆಳ್ಮ ರೆಂಜಾಡಿ, ಅಡ್ಡೂರು, ಮೂಲರಪಟ್ನ ದಲ್ಲಿ ತೆರೆಯಲಾದ ಟೈಲರಿಂಗ್ ಸೆಂಟರ್ ಗಳಲ್ಲಿ ನೂರಾರು ಮಹಿಳೆಯರು ಉಚಿತವಾಗಿ ತರಬೇತಿ ಪಡೆದುಕೊಂಡು ಸ್ವ ಉದ್ಯೋಗದ ಮೂಲಕ ಸಂಪಾದಿಸುತ್ತಿದ್ದಾರೆ. ಪ್ರಸ್ತುತ ಕಿನ್ಯ ಮತ್ತು ಮಲ್ಲೂರು ದೆಮ್ಮೆಲೆಯಲ್ಲಿ ಟೈಲರಿಂಗ್ ಸೆಂಟರ್ ಗಳು ಕಾರ್ಯಾಚರಿಸುತ್ತಿವೆ ಎಂದು ಸಂಘಟಕರು ತಿಳಿಸಿದ್ದಾರೆ.