×
Ad

ಉಡುಪಿ: ಅ.6ರಿಂದ ಬುಡೋಕಾನ್ ಕರಾಟೆ ಸ್ಪರ್ಧೆ

Update: 2018-10-04 22:09 IST

ಉಡುಪಿ, ಅ.4: ಉಡುಪಿ ಜಿಲ್ಲಾ ಬುಡೋಕಾನ್ ಕರಾಟೆ ಮತ್ತು ಸೆಲ್ಫ್ ಡಿಫೆನ್ಸ್‌ನ ಆಶ್ರಯದಲ್ಲಿ ಎರಡನೇ ರಾಜ್ಯ ಮಟ್ಟದ ಅಂತರ್ ಶಾಖಾ ಕರಾಟೆ ಚಾಂಪಿಯನ್‌ಷಿಪ್ ‘ಬುಡೋಕಾನ್ ಧಮಾಕ-2018’ ಅ.6 ಮತ್ತು 7ರಂದು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ ಎಂದು ಸಂಘಟನಾ ಸಮ್ಝಿತಿಯ ಅಧ್ಯಕ್ಷ ನಿತ್ಯಾನಂದ ಕೆಮ್ಮಣ್ಣು ತಿಳಿಸಿದ್ದಾರೆ.

ಗುರುವಾರ ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು ಒಂದು ಸಾವಿರಕ್ಕೂ ಅಧಿಕ ಸ್ಪರ್ಧಾಳುಗಳು ಭಾಗವಹಿಸುವ ನಿರೀಕ್ಷೆ ಇದೆ. ಒಟ್ಟು ಏಳು ಅಂಕಣಗಳಲ್ಲಿ ಸ್ಪರ್ಧೆಗಳು ನಡೆಯಲಿವೆ ಎಂದರು.

ಸ್ಪರ್ಧೆಯು ಪುರುಷರು ಮತ್ತು ಮಹಿಳೆಯರ ಹಿರಿಯ ಮತ್ತು ಕಿರಿಯ ವಿಭಾಗಗಳಲ್ಲಿ ನಡೆಯಲಿವೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ, ಶಾಶ್ವತ ಫಲಕ ಹಾಗೂ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. 150ಕ್ಕೂ ಅಧಿಕ ತೀರ್ಪುಗಾರರು ಇಲ್ಲಿ ಭಾಗವಹಿಸುವರು ಎಂದು ನಿತ್ಯಾನಂದ ಕೆಮ್ಮಣ್ಣು ತಿಳಿಸಿದರು.

ಕರಾಟೆ ಸ್ಪರ್ಧೆಯನ್ನು ಅ.6ರ ಶನಿವಾರ ಬೆಳಗ್ಗೆ 8 ಗಂಟೆಗೆ ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದಾರೆ. ಶಾಸಕ ಕೆ.ರಘುಪತಿ ಭಟ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸಮಾರೋಪ ಸಮಾರಂಭ ಅ.7ರ ಅಪರಾಹ್ನ 3:30ಕ್ಕೆ ನಡೆಯಲಿದೆ. ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸುವರು.

ಪತ್ರಿಕಾಗೋಷ್ಠಿಯಲ್ಲಿ ಸಂಘಟನಾ ಸಮಿತಿ ಕಾರ್ಯದರ್ಶಿ ರೋಹಿತಾಕ್ಷ, ಸತೀಶ್ ಬೆಳ್ಮಣ್, ಪ್ರತಿಭಾ, ಗಣೇಶ್ ಎರ್ಮಾಳ್, ಡೋನಾಲ್ಡ್ ಕ್ವಾಡ್ರಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News