ನಾವು ಬಂದೂಕಿನಿಂದ ಅಧಿಕಾರ ನಡೆಸುವುದಿಲ್ಲ: ಡಿಜಿಪಿ
ಲಕ್ನೋ, ಅ. 3: ಕಳೆದ ವಾರ ನಡೆದ ಆ್ಯಪಲ್ ಕಾರ್ಯ ನಿರ್ವಹಣಾಧಿಕಾರಿ ವಿವೇಕ್ ತಿವಾರಿ ಅವರ ಹತ್ಯೆಯಂತಹ ಘಟನೆಗಳಿಗೆ ವೃತ್ತಿಪರ ತರಬೇತಿಯ ಕೊರತೆ ಕಾರಣ ಎಂದು ರಾಜ್ಯ ಪೊಲೀಸ್ ವರಿಷ್ಠ ಒ.ಪಿ. ಸಿಂಗ್ ಗುರುವಾರ ಹೇಳಿದ್ದಾರೆ.
2013-2017ರ ನಡುವೆ ನೇಮಕಗೊಂಡ ಕಾನ್ಸ್‌ಟೆಬಲ್‌ಗಳಿಗೆ ಪುನಶ್ಚೇತನ ಶಿಬಿರ ಆಯೋಜಿಸಬೇಕು ಎಂದು ಅವರು ಹೇಳಿದ್ದಾರೆ. ಲಕ್ನೋದಲ್ಲಿ ತಿವಾರಿ ಅವರ ಹತ್ಯೆ ಕುರಿತು ಮಾತನಾಡಿದ ಅವರು, ಆ ಇಬ್ಬರು ಕಾನ್ಸ್‌ಟೆಬಲ್ (ತಿವಾರಿ ಹತ್ಯೆ ಘಟನೆಯಲ್ಲಿ ಭಾಗಿಯಾದ)ಗಳು ರಾಜ್ಯ ಪೊಲೀಸ್‌ನ ಬ್ರಾಂಡ್ ರಾಯಭಾರಿ ಅಲ್ಲ ಎಂದಿದ್ದಾರೆ. ‘‘ನಾವು ಬಂದೂಕಿನಿಂದ ಅಧಿಕಾರ ನಡೆಸುವುದಿಲ್ಲ. ಬದಲಾಗಿ ಜನರನ್ನು ಪ್ರೀತಿಸುತ್ತೇವೆ. ಶಶ್ತ್ರಾಸ್ತ್ರ ಹೊಂದಿರದ ವ್ಯಕ್ತಿಯ ಮೇಲೆ ಯಾಕೆ ಗುಂಡು ಹಾರಿಸಬೇಕಿತ್ತು. ಪೊಲೀಸರನ್ನು ಬಂಧಿಸಲಾಗಿದೆ ಹಾಗೂ ಸೇವೆಯಿಂದ ವಜಾಗೊಳಿಸಲಾಗಿದೆ. ಪೊಲೀಸ್ ಪಡೆಯಲ್ಲಿರುವ ಇಂತಹ ಕೆಲವರ ಕಾರಣಕ್ಕೆ ಇಡೀ ಪೊಲೀಸ್ ಪಡೆಯ ಸಂಸ್ಕೃತಿಯನ್ನೇ ಕೆಟ್ಟದಾಗಿ ವ್ಯಾಖ್ಯಾನಿಸಲು ಸಾಧ್ಯವಿಲ್ಲ’’ ಎಂದು ಸಿಂಗ್ ಹೇಳಿದ್ದಾರೆ.