×
Ad

ಪುತ್ತೂರು: ಆಸ್ಪತ್ರೆ ವಿರುದ್ಧ ಕಾನೂನು ಕ್ರಮಕ್ಕೆ ಚಿಗುರು ಗೆಳೆಯರ ಬಳಗ ಆಗ್ರಹ

Update: 2018-10-04 22:30 IST

ಪುತ್ತೂರು, ಅ. 4: ಇತ್ತೀಚೆಗೆ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡ ಯುವಕನನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ ಸಂದರ್ಭದಲ್ಲಿ ಆಸ್ಪತ್ರೆಯವರು ಅಮಾನುಷವಾಗಿ ಹಾಗೂ ನಿರ್ಲಕ್ಷ್ಯತನದಿಂದ ವರ್ತಿಸಿದ್ದಾರೆ ಎನ್ನಲಾಗಿದ್ದು, ಆಸ್ಪತ್ರೆ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಆಸ್ಪತ್ರೆ ಮುಂಭಾಗದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಕೆಮ್ಮಾಯಿ ಚಿಗುರು ಗೆಳೆಯರ ಬಳಗದ ಅಧ್ಯಕ್ಷ ಸಂತೋಷ್ ಕುಮಾರ್ ಎಚ್ಚರಿಸಿದ್ದಾರೆ.

ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಳೆದ ಸೆ.14ರಂದು ಇಲ್ಲಿನ ದರ್ಬೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆತರಲಾಗಿದ್ದ ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಮುಂಡೂರು ನಿವಾಸಿ ನಟೇಶ್ ಎಂಬವರನ್ನು ರಾತ್ರಿ ಕರ್ತವ್ಯ ಪಾಳಿಯಲ್ಲಿದ್ದ ವೈದ್ಯರು ಸರಿಯಾಗಿ ತಪಾಸಣೆ ನಡೆಸಿಲ್ಲ. ತುರ್ತು ನಿಗಾ ಘಟಕಕ್ಕೆ ದಾಖಲಿಸಿಕೊಂಡು ಪರಿಶೀಲನೆ ಮಾಡಿಲ್ಲ. ಅಲ್ಲಿದ್ದ ಡ್ಯೂಟಿ ಡಾಕ್ಟರ್ ನಟೇಶ್‍ನನ್ನು ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲು ಮಾಡಿಕೊಂಡಿಲ್ಲ. ತುರ್ತು ಚಿಕಿತ್ಸೆ ನೀಡಿ ಎಂದು ನಟೇಶ್‍ನನ್ನು ಕರೆ ತಂದವರು ಹೇಳಿದರೂ ವೈದ್ಯರು ಕೇಳಲಿಲ್ಲ. ದರ್ಪದಿಂದ ಮಾತನಾಡಿದ್ದಲ್ಲದೆ, ತಪಾಸಣೆ ನಡೆಸುವ ಮೊದಲೇ ಮರಣ ಸಂಭವಿಸಿದೆ ಎಂದು ಘೋಷಿಸಿದ್ದಾರೆ. ಮೃತಪಟ್ಟ ಬಳಿಕ ಮೃತ ದೇಹವನ್ನು ಅಮಾನುಷವಾಗಿ ದಾಸ್ತಾನು ಕೊಠಡಿಯೊಂದರಲ್ಲಿ ತಳ್ಳಿ ಇಡಲಾಗಿದೆ. ಇಂಥ ಅಮಾನವೀಯ ವರ್ತನೆ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಆಸ್ಪತ್ರೆಯವರ ವರ್ತನೆಯ ಬಗ್ಗೆ ಮೃತ ನಟೇಶ್ ಅವರ ಪತ್ನಿ ಯಶೋಧಾ ನಮ್ಮ ಸಂಘಟನೆಗೆ ದೂರು ನೀಡಿದ್ದಾರೆ. ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವರು, ರಾಜ್ಯ ಆರೋಗ್ಯ ಸಚಿವರು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯ ಅಧಿಕಾರಿಗಳು, ಪುತ್ತೂರು ಶಾಸಕರು, ಕಲಿಯುಗ ಸೇವಾ ಸಮಿತಿ, ಬಿರುವೆರ್ ಕುಡ್ಲ ಸಂಘಟನೆ, ಯುವವಾಹಿನಿ ಪುತ್ತೂರು, ಬಿಲ್ಲವ ಸಂಘ ಪುತ್ತೂರು ಮುಂತಾದವರಿಗೆ ಮನವಿ ಮಾಡಲಾಗಿದೆ. ಇದೀಗ ಆಸ್ಪತ್ರೆ ವಿರುದ್ಧ ಪೊಲೀಸ್ ದೂರು ನೀಡಲು ನಿರ್ಧರಿಸಿದ್ದೇವೆ. ಅಸ್ಪತ್ರೆಯವರು ತೋರಿದ ಅಮಾನುಷ ವರ್ತನೆಗಾಗಿ ಅವರ ವಿರುದ್ಧ ಕ್ರಮವಾಗಬೇಕು. ಇನ್ನು ಮುಂದೆ ಯಾರಿಗೂ ಇಂಥ ಪರಿಸ್ಥಿತಿ ಬರಬಾರದು. ಮುಂದಿನ 20 ದಿನಗಳಲ್ಲಿ ಆಸ್ಪತ್ರೆ ವಿರುದ್ಧ ಕಾನೂನು ಕ್ರಮ ಜರುಗಿಸದಿದ್ದರೆ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮೃತ ನಟೇಶ್ ಪತ್ನಿ ಯಶೋಧಾ, ತಾಯಿ ಭಾಗೀರಥಿ, ಸಹೋದರರಾದ  ಪ್ರಕಾಶ್ ಪೂಜಾರಿ, ವಸಂತ ಪೂಜಾರಿ, ನೈತಾಡಿಯ ಹರ್ಷ ಯುವಕ ಮಂಡಲದ ಅಧ್ಯಕ್ಷ ಚೆನ್ನಪ್ಪ ಗೌಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News