×
Ad

ಅಖಿಲ ಭಾರತ ಅಂತರ್ ವಿ.ವಿ. ಕ್ರಾಸ್‍ಕಂಟ್ರಿ: ಆಳ್ವಾಸ್ ಕ್ರೀಡಾಪಟುಗಳ ಅಮೋಘ ಸಾಧನೆ

Update: 2018-10-05 19:09 IST

ಮೂಡುಬಿದಿರೆ, ಅ.5: ಗುಲ್ಬರ್ಗಾ ವಿ.ವಿಯಲ್ಲಿ ನಡೆದ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಮಟ್ಟದ ಪುರುಷರ ಮತ್ತು ಮಹಿಳೆಯರ ಕ್ರಾಸ್‍ಕಂಟ್ರಿ ಚಾಂಪಿಯನ್‍ಶಿಪ್‍ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ ಆಳ್ವಾಸ್‍ನ ಕ್ರೀಡಾಪಟುಗಳ  ಸಾಧನೆಯಿಂದಾಗಿ ಮಂಗಳೂರು ವಿ.ವಿ ನಾಲ್ಕನೇ ಬಾರಿಗೆ ಸಮಗ್ರ ಚಾಂಪಿಯನ್‍ಶಿಪ್‍ನ್ನು ಪಡೆದುಕೊಂಡಿದೆ.

ಪುರುಷರ ವಿಭಾಗದಲ್ಲಿ 15 ಅಂಕದೊಂದಿಗೆ ಚಾಂಪಿಯನ್ ಆಗಿ ಹಾಗೂ ಮಹಿಳೆಯರ ವಿಭಾಗದಲ್ಲಿ 50 ಅಂಕಗಳನ್ನು ಪಡೆಯುವುದರೊಂದಿಗೆ ರನ್ನರ್ಸ್‍ಅಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. 

ಪುರುಷರ ವಿಭಾಗದ 10ಕಿಮೀ ಓಟದಲ್ಲಿ ಆಳ್ವಾಸ್‍ನ ಕ್ರೀಡಾಪಟುಗಳಾದ ನರೇಂದ್ರ ಪ್ರತಾಪ್ ದ್ವಿತೀಯ ಸ್ಥಾನ, ದಿನೇಶ್ ತೃತೀಯ ಸ್ಥಾನ, ಅಬ್ದುಲ್ ಬ್ಯಾರಿ ನಾಲ್ಕನೇ ಸ್ಥಾನ, ಶ್ಯಾಮ್ ಆರನೇ ಸ್ಥಾನದೊಂದಿಗೆ ಗುರಿಮುಟ್ಟಿ ಪುರುಷರ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಮಹಿಳೆಯರ ವಿಭಾಗದಲ್ಲಿ 10ಕಿಮೀ ಓಟದಲ್ಲಿ ಆಳ್ವಾಸ್‍ನ ಕ್ರೀಡಾಪಟುಗಳಾದ ಚೌಹಾನ್ ಜ್ಯೋತಿ ತೃತೀಯ ಸ್ಥಾನ, ಭಗತ್ ಶೀತಲ್ ನಾಲ್ಕನೇ ಸ್ಥಾನ, ಚೈತ್ರಾ ದೇವಾಡಿಗ 22ನೇ ಸ್ಥಾನದೊಂದಿಗೆ ಗುರಿಮುಟ್ಟಿ ರನ್ನರ್ಸ್ ಅಪ್ ಪ್ರಶಸ್ತಿ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಮಂಗಳೂರು ವಿ.ವಿ.ಯನ್ನು ಪ್ರತಿನಿಧಿಸಿದ ಆಳ್ವಾಸ್‍ನ ಕ್ರೀಡಾಪಟುಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.

ಪುರುಷರ ವಿಭಾಗದಲ್ಲಿ ಮಂಗಳೂರು ವಿ.ವಿ.ಯನ್ನು ಪ್ರತಿನಿಧಿಸಿದ 6 ಕ್ರೀಡಾಪಟುಗಳಲ್ಲಿ 6 ಕ್ರೀಡಾಪಟುಗಳೂ ಆಳ್ವಾಸ್‍ನ ಕ್ರೀಡಾಪಟುಗಳಾಗಿದ್ದು ಹಾಗೂ ಮಹಿಳೆಯರ ವಿಭಾಗದಲ್ಲಿ 6 ಕ್ರೀಡಾಪಟುಗಳಲ್ಲಿ 4 ಕ್ರೀಡಾಪಟುಗಳು ಆಳ್ವಾಸ್‍ನ ಕ್ರೀಡಾಪಟುಗಳು ಎಂಬುದು ಗಮನಾರ್ಹ ವಿಷಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News