×
Ad

ಟಿಕೆಟ್ ನೀಡದ ಬಸ್ ನಿರ್ವಾಹಕರು, ಶೀಘ್ರ ಆರ್‌ಟಿಒ ಸಭೆ ಕರೆದು ಸೂಕ್ತ ಕ್ರಮ: ಆಯುಕ್ತ ಟಿ.ಆರ್.ಸುರೇಶ್

Update: 2018-10-05 20:27 IST

ಮಂಗಳೂರು, ಅ.5: ನಗರದ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರು ಟಿಕೆಟ್ ಕೇಳಿದರೂ ಕೊಡದಿರುವ ಪ್ರಕರಣಗಳು ಹೆಚ್ಚುತ್ತಿವೆ. ಹಲವು ಬಸ್‌ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದರೂ ಹತೋಟಿಗೆ ಬರುತ್ತಿಲ್ಲ. ಈ ಬಗ್ಗೆ ಶೀಘ್ರದಲ್ಲಿಯೇ ಆರ್‌ಟಿಒ ಸಭೆ ಕರೆಯಲಾಗುವುದು ಎಂದು ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ತಿಳಿಸಿದ್ದಾರೆ.

ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶುಕ್ತವಾರ ನಡೆದ ಪೊಲೀಸ್ ಫೋನ್‌ಇನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಟಿಕೆಟ್ ನೀಡದ ಬಸ್‌ಗಳ ಪರವಾನಿಗೆಯನ್ನು ರದ್ದುಗೊಳಿಸುವ ಸಾಧ್ಯತೆಗಳ ಬಗ್ಗೆ ಆರ್‌ಟಿಒ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು.

ಕೆಲವು ಪ್ರಕರಣಗಳಲ್ಲಿ ಪ್ರಯಾಣಿಕರು ಬಸ್ ನಿರ್ವಾಹಕರಿಗೆ ಬಸ್ ನೀಡದೆ, ‘ಟಿಕೆಟ್ ನೀಡುವ ಬಸ್‌ಗಳಲ್ಲೇ ಪ್ರಯಾಣಿಸಿ’ ಎನ್ನುವ ಬೇಜವಾಬ್ದಾರಿ ಮಾತುಗಳನ್ನಾಡುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದರು. ಆಕಾಶ್‌ಭವನ- ಕಂಕನಾಡಿ ಹಾಗೂ ಕುಲಶೇಖರ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳಲ್ಲಿ ಟಿಕೆಟ್ ನೀಡುತ್ತಿಲ್ಲ ಎಂದು ಸಾರ್ವಜನಿಕರು ಕರೆ ಮಾಡಿ ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತರು, ಬಸ್‌ಗಳಲ್ಲಿ ಟಿಕೆಟ್ ನೀಡದ ಬಸ್ ನಿರ್ವಾಹಕರ ವಿರುದ್ಧ ಹಾಗೂ ಬಸ್‌ಗಳ ಮಾಲಕರ ವಿರುದ್ಧ ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಆರ್‌ಟಿ ಸಭೆಯನ್ನು ಕರೆದು ಚರ್ಚೆ ಮಾಡಲಾಗುವುದು. ಬಸ್‌ಗಳಲ್ಲಿ ಇಳಿಯುವ ಫುಟ್‌ಬೋಡ್‌ಗಳ ಅಳತೆ ಹೆಚ್ಚು ಕಡಿಮೆ ಇದ್ದು, ಈ ಬಗ್ಗೆ ಕ್ರಮ ವಹಿಸುವುದಾಗಿ ಅವರು ತಿಳಿಸಿದರು.

ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ ಬಳಿ ಪಾರ್ಕಿಂಗ್ ಸಮಸ್ಯೆಯಾಗುತ್ತಿದೆ. ಝೀಬ್ರಾ ಕ್ರಾಸಿಂಗ್ ಮಾರ್ಕ್ ಮಾಡಬೇಕು ಎಂದು ಕುದ್ರೋಳಿಯಿಂದ ಅಶೋಕ್, ಕೃಷ್ಣ ನಾಯಕ್ ಎಂಬವರು ಕರೆ ಮಾಡಿ ಒತ್ತಾಯಿಸಿದರು. ಈ ಬಗ್ಗೆ ಪಾಲಿಕೆಗೆ ಪತ್ರ ಬರೆದು ಕ್ರಮ ವಹಿಸಲಾಗುವುದು ಎಂದು ಆಯುಕ್ತರು ಪ್ರತಿಕ್ರಿಯಿಸಿದರು.
ಇತರ ಪ್ರಮುಖ ದೂರುಗಳು:  ಕೊಟ್ಟಾರ- ಸುರತ್ಕಲ್ ಮಾರ್ಗದ ಬಸ್‌ಗಳಲ್ಲಿ ಇಷ್ಟಬಂದಂತೆ ಪ್ರಯಾಣದ ದರವನ್ನು ವಸೂಲಿ ಮಾಡುತ್ತಿರುವುದು. ಮಾರ್ನಮಿಕಟ್ಟೆ ಜಂಕ್ಷನ್‌ನಲ್ಲಿ ವಿದ್ಯಾರ್ಥಿಗಳು ಸಿಗರೇಟ್ ಸೇದುತ್ತಿದ್ದು, ಇದರಿಂದ ಸಾರ್ವಜನಿಕರು, ಪಾದಚಾರಿಗಳಿಗೆ ತೊಂದರೆಯಗುತ್ತಿರುವುದು. ಮೂಡುಬಿದಿರೆಯಲ್ಲಿ ವೀಸಾ ಮಾಡಿಸಿ ಕೊಡುವುದಾಗಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ. ಅತ್ತಾವರ ರಸ್ತೆಯ ಎರಡೂ ಬದಿಯಲ್ಲಿ ವಾಹನಗಳನ್ನು ನಿಲುಗಡೆ ಮಾಡುತ್ತಿರುವ ಬಗ್ಗೆ. ತಾರೆತೋಟ ಮಾರ್ಗದಲ್ಲಿ ಬಸ್‌ಗಳು ಸಂಚರಿಸದಿರುವ ಬಗ್ಗೆ ಫೋನ್‌ಇನ್ ಕಾರ್ಯಕ್ರಮದಲ್ಲಿ ಹಲವು ದೂರುಗಳು ಕೇಳಿಬಂದವು.

ಪೊಲೀಸ್ ಫೋನ್‌ಇನ್ ಕಾರ್ಯಕ್ರಮದಲ್ಲಿ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್, ಸಂಚಾರ ಪೊಲೀಸ್ ಅಧಿಕಾರಿಗಳಾದ ಅಮಾನುಲ್ಲಾ ಎ., ಎಚ್.ಶಿವಪ್ರಕಾಶ್, ಕೆ.ಎಚ್.ಯೂಸುಫ್, ಪುರುಷೋತ್ತಮ, ಕೆನರಾ ಬಸ್ ಅಸೋಸಿಯೇಶನ್ ಅಧ್ಯಕ್ಷ ರಾಜವರ್ಮ ಬಳ್ಳಾಲ್ ಮತ್ತಿತರರು ಉಪಸ್ಥಿತರಿದ್ದರು.

ಮೀನಿನ ಲಾರಿ ಉಪಟಳ: 8 ವಾಹನ ವಶಕ್ಕೆ
ಜಪ್ಪು, ಜಪ್ಪಿನಮೊಗರು, ಮಂಗಳಾದೇವಿ, ಹೊಯ್ಗೆ ಬಜಾರ್ ಪರಿಸರದಲ್ಲಿ ಮುಂಜಾನೆ ಮೀನು ಸಾಗಾಟ ಲಾರಿಯಿಂದ ನೀರು ಸೋರಿಕೆಯಾಗಿ ಪರಿಸರ ದುರ್ನಾತಕ್ಕೆ ಕಾರಣವಾಗಿದೆ. ಧಾರ್ಮಿಕ ಕೇಂದ್ರಗಳು ಇರುವಲ್ಲಿ ತೊಂದರೆಯಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕಳೆದ ವಾರದ ಫೋನ್‌ಇನ್ ಕಾರ್ಯಕ್ರಮದಲ್ಲಿ ನಾಗರಿಕರು ದೂರಿದ್ದರು. ಈ ಬಗ್ಗೆ ಆಯುಕ್ತರು, ಬೆಳಗ್ಗೆ 6ರಿಂದ 8ಗಂಟೆವರೆಗೆ ಈ ಮಾರ್ಗದಲ್ಲಿ ಪೊಲೀಸ್ ವಾಹನ ಕಾರ್ಯಾಚರಣೆಗೆ ಸೂಚಿಸಿದ್ದರು.

ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಪೊಲೀಸ್ ಅಧಿಕಾರಿಗಳು, ಜಪ್ಪು, ಜಪ್ಪಿನಮೊಗರು, ಮಂಗಳಾದೇವಿ, ಹೊಯ್ಗೆ ಬಜಾರ್ ಭಾಗದಲ್ಲಿ 8 ಮೀನು ಸಾಗಾಟದ ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಸಾರ್ವಜನಿಕರು, ಪಾದಚಾರಿಗಳಿಗೆ ವಿನಾ ಕಾರಣ ತೊಂದರೆ ಉಂಟಾಗುವ ಮೀನು ಸಾಗಾಟ ವಾಹನಗಳ ವಿರುದ್ಧದ ಕಾರ್ಯಾಚರಣೆ ಮುಂದುವರಿಸಲಾಗುವುದು ಎಂದು ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News