ಡೀಸೆಲ್ ಬೆಲೆ ಕೂಡ ಕಡಿತ: ದೇವೇಂದ್ರ ಫಡ್ನವೀಸ್

Update: 2018-10-05 15:38 GMT

ನಾಸಿಕ್, ಅ. 5: ಮಹಾರಾಷ್ಟ್ರದಲ್ಲಿ ಪೆಟ್ರೋಲ್ ಮೇಲಿನ ವ್ಯಾಟ್ ಅನ್ನು ಕಡಿತಗೊಳಿಸಿದ ಒಂದು ದಿನದ ಬಳಿಕ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಡೀಸಲ್ ಬೆಲೆಯನ್ನು ಕೂಡ ಸರಿಸುಮಾರು ಲೀಟರ್ 4 ರೂ. ಕಡಿತಗೊಳಿಸಲಾಗುವುದು ಎಂದು ಶುಕ್ರವಾರ ಹೇಳಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪೆಟ್ರೋಲ್ ಮೇಲಿನ ವ್ಯಾಟ್ ಅನ್ನು ಲೀಟರ್‌ಗೆ 2.50 ರೂ. ಕಡಿತಗೊಳಿಸಿರುವ ರಾಜ್ಯ ಸರಕಾರದ ನಿರ್ಧಾರವನ್ನು ಜನರು ಸ್ವಾಗತಿಸಿದ್ದಾರೆ ಎಂದರು.

‘‘ಡೀಸೆಲ್ ಬೆಲೆಯನ್ನು ಲೀಟರ್‌ಗೆ 4 ರೂ. ಕಡಿತಗೊಳಿಸುವ ದಾರಿಗಳ ಬಗ್ಗೆ ನಾವು ಯೋಚಿಸುತ್ತಿದ್ದೇವೆ. ಸಾರ್ವಜನಿಕ ಹಿತಾಸಕ್ತಿ ಹಿನ್ನೆಲೆಯಲ್ಲಿ ಸರಕಾರ ನಷ್ಟ ಭರಿಸಲಿದೆ.’’ ಎಂದು ಫಡ್ನವೀಸ್ ಹೇಳಿದ್ದಾರೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಸಿ ಕೇಂದ್ರ ಸರಕಾರ ಘೋಷಿಸಿದ ಬಳಿಕ ಗುರುವಾರ ಮಹಾರಾಷ್ಟ್ರ ಹಾಗೂ ಇತರ ಕನಿಷ್ಠ 10 ರಾಜ್ಯಗಳು ಪೆಟ್ರೋಲ್ ಹಾಗೂ ಡೀಸೆಲ್‌ನ ವ್ಯಾಟ್‌ನಂತಹ ವಿವಿಧ ಸ್ಥಳೀಯ ತೆರಿಗೆಗಳನ್ನು ಇಳಿಕೆ ಮಾಡಿತ್ತು. ಆದಾಗ್ಯೂ, ಮಹಾರಾಷ್ಟ್ರ ಸರಕಾರ ಪೆಟ್ರೋಲ್ ಮೇಲಿನ ವ್ಯಾಟ್ ಅನ್ನು ಮಾತ್ರ ಕಡಿತಗೊಳಿಸಿತ್ತು.

ಶ್ರೀಮಂತ ವರ್ಗದ ಜನರ ಹಿತಾಸಕ್ತಿ ಪರವಾಗಿ ವರ್ತಿಸುತ್ತಿದೆ ಎಂದು ಸರಕಾರದ ವಿರುದ್ಧ ಜನರು ಟೀಕಿಸಿದ್ದರು. ಕೇಂದ್ರ ಹಾಗೂ ರಾಜ್ಯ ಸರಕಾರದ ನಿರ್ಧಾರದಿಂದ ಮಹಾರಾಷ್ಟ್ರದಲ್ಲಿ ಪೆಟ್ರೋಲ್‌ಗೆ ಶುಕ್ರವಾರ 6 ಗಂಟೆಯಿಂದ ಭರವಸೆ ನೀಡಿದ ಲೀಟರ್‌ಗೆ 5 ರೂ. ಬದಲಾಗಿ ಲೀಟರ್‌ಗೆ 4.37 ಇಳಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News