ಶ್ರೀನಗರ: ಉಗ್ರರಿಂದ ಇಬ್ಬರು ಎನ್‌ಸಿ ಕಾರ್ಯಕರ್ತರ ಹತ್ಯೆ

Update: 2018-10-05 15:47 GMT

ಶ್ರೀನಗರ, ಅ. 5: ಜಮ್ಮು ಹಾಗೂ ಕಾಶ್ಮೀರದ ನಗರ ಸ್ಥಳೀಯ ಸಂಸ್ಥೆಯ ಚುನಾವಣೆಯ ಮೊದಲ ಹಂತಕ್ಕಿಂತ ಮುನ್ನ ಹಬ್ಬಾ ಕಡಲ್ ಪ್ರದೇಶದಲ್ಲಿ ಶುಕ್ರವಾರ ಉಗ್ರರು ಗುಂಡು ಹಾರಿಸಿ ನ್ಯಾಶನಲ್ ಕಾನ್ಫರೆನ್ಸ್‌ನ ಇಬ್ಬರು ಕಾರ್ಯಕರ್ತರನ್ನು ಹತ್ಯೆಗೈದಿದ್ದಾರೆ ಹಾಗೂ ಇನ್ನೊಬ್ಬರನ್ನು ಗಾಯಗೊಳಿಸಿದ್ದಾರೆ.

ಶ್ರೀನಗರದ ಹಬ್ಬಾ ಕಡಲ್‌ನ ಕರ್ಫಾಲಿ ಮೊಹಲ್ಲಾದಲ್ಲಿ ಮೂವರು ನ್ಯಾಶನಲ್ ಕಾನ್ಫರೆನ್ಸ್‌ನ ಕಾರ್ಯಕರ್ತರ ಮೇಲೆ ಉಗ್ರರು ಸಮೀಪದಿಂದ ಗುಂಡು ಹಾರಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡಿನಿಂದ ಮೂವರು ರಾಜಕೀಯ ಕಾರ್ಯಕರ್ತರು ಗಂಭೀರ ಗಾಯಗೊಂಡಿದ್ದರು. ಅವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಅವರಲ್ಲಿ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಕೋರರನ್ನು ಬಂಧಿಸಲು ಕೂಡಲೇ ಪೊಲೀಸರು ಹಾಗೂ ಕೇಂದ್ರ ಮೀಸಲು ಪಡೆಯ ಪೊಲೀಸರು ಆ ಪ್ರದೇಶವನ್ನು ಸುತ್ತುವರಿದರು. ಆದರೆ, ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ.

ಪರಿಸ್ಥಿತಿ ಅವಲೋಕಿಸಲು ಪೊಲೀಸ್ ಹಾಗೂ ಅರೆಸೇನಾ ಪಡೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ದಾಳಿಗೆ ಒಳಗಾದವರು ನಮ್ಮ ಪಕ್ಷಕ್ಕೆ ಸೇರಿದವರೇ ಎಂದು ನಾವು ಖಚಿತಪಡಿಸಿಕೊಳ್ಳಲಿದ್ದೇವೆ ಎಂದು ನ್ಯಾಶನಲ್ ಕಾನ್ಫರೆನ್ಸ್‌ನ ನಾಯಕರು ತಿಳಿಸಿದ್ದಾರೆ. ಜಮ್ಮು ಹಾಗೂ ಕಾಶ್ಮೀರದ ನಿವಾಸಿಗಳಿಗೆ ವಿಶೇಷ ಸೌಲಭ್ಯ ನೀಡುವ ಕಲಂ 35ರ ಕುರಿತು ಕೇಂದ್ರ ಸರಕಾರದ ನಿಲುವನ್ನು ವಿರೋಧಿಸಿ ರಾಜ್ಯದಲ್ಲಿ ನಡೆಯಲಿರುವ ನಗರ ಸ್ಥಳೀಯ ಸಂಸ್ಥೆ ಹಾಗೂ ಪಂಚಾಯತ್ ಚುನಾವಣೆಯನ್ನು ನ್ಯಾಶನಲ್ ಕಾನ್ಫರೆನ್ಸ್ ಹಾಗೂ ಪಿಡಿಪಿ ಬಹಿಷ್ಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News