×
Ad

ಸಮುದ್ರ ಪ್ರಕ್ಷುಬ್ಧ; ಮೀನುಗಾರರಿಗೆ ಸಂಕಷ್ಟ

Update: 2018-10-05 22:45 IST

ಮಂಗಳೂರು, ಅ. 5: ಅರಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿ ಚಂಡಮಾರುತ ಸಾಧ್ಯತೆ ಹಿನ್ನೆಲೆ ಮಂಗಳೂರು ಬಂದರ್‌ನಲ್ಲಿ ಸಾವಿರಾರು ಬೋಟುಗಳು ಲಂಗರು ಹಾಕಿವೆ. ದಕ್ಕೆಯಲ್ಲಿ ಬೋಟುಗಳನ್ನು ನಿಲ್ಲಿಸಲೂ ಸ್ಥಳವಿಲ್ಲದೆ ಮೀನುಗಾರರು ಅಕ್ಷರಶಃ ಪರದಾಡುತ್ತಿದ್ದಾರೆ.

ಚಂಡಮಾರುತ ಅಪಾಯ ಹಿನ್ನೆಲೆ ಜಿಲ್ಲಾಡಳಿತ ನೀಡಿದ ಎಚ್ಚರಿಕೆಯಿಂದ ಬಂದರ್‌ಗೆ ಶುಕ್ರವಾರ ಸುಮಾರು 200ರಷ್ಟು ಬೋಟುಗಳು ವಾಪಸಾಗಿವೆ. ಗುರುವಾರ 300ಕ್ಕೂ ಹೆಚ್ಚು ಬೋಟುಗಳು ಬಂದರ್‌ನಲ್ಲಿ ಲಂಗುರ ಹಾಕಿದ್ದವು. ಶನಿವಾರವೂ ಸುಮಾರು 300ಕ್ಕಿಂತಲೂ ಹೆಚ್ಚು ಬೋಟುಗಳು ವಾಪಸಾಗುವ ಸಾಧ್ಯತೆಯಿದೆ ಎಂದು ಪರ್ಸಿನ್ ಮೀನುಗಾರರ ಸಂಘದ ಅಧ್ಯಕ್ಷ ಮೋಹನ್ ಬೆಂಗ್ರೆ ‘ವಾರ್ತಾಭಾರತಿ’ಗೆ ಮಾಹಿತಿ ನೀಡಿದ್ದಾರೆ.

ಪ್ರತಿ ಬೋಟಿಗೆ 50ಸಾವಿರ ರೂ. ನಷ್ಟ: ಮೀನುಗಾರಿಕೆಗೆ ತೆರಳಿದ್ದ ಬೋಟುಗಳು ಪ್ರತಿದಿನ ಸುಮಾರು ಸಾವಿರಾರು ರೂ. ಮೌಲ್ಯದ ಮೀನುಗಳನ್ನು ಹಿಡಿದು ತರುತ್ತಿದ್ದವು. ಆದರೆ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಪ್ರಕ್ಷುಬ್ಧತೆ ಹೆಚ್ಚಿದ್ದರಿಂದ ಮೀನುಗಾರಿಕಾ ಬೋಟುಗಳು ವಾಪಸಾಗುವ ಮೂಲಕ ಪ್ರತಿದಿನ 50 ಸಾವಿರ ರೂ. ನಷ್ಟವನ್ನು ಅನುಭವಿಸುತ್ತಿವೆ.

ಮೀನುಗಾರಿಕಾ ಕಾರ್ಮಿಕರಿಗೆ ಬೋಟುಗಳ ಮಾಲಕರು ಪ್ರತಿದಿನ 3000 ರೂ.ನಷ್ಟು ರೇಶನ್ ಹಾಗೂ ಬೋಸನ್ ಸೇರಿದಂತೆ 7 ಸಾವಿರಕ್ಕೂ ಹೆಚ್ಚು ನಷ್ಟ ಉಂಟಾಗುತ್ತದೆ. ಜೊತೆಗೆ ಬೋಟುಗಳ ಜೊತೆಗೆ ತೆಗೆದುಕೊಂಡು ಹೋಗಿದ್ದ ಮಂಜುಗಡ್ಡೆ ಸಹಿತ ಹಲವು ವಸ್ತುಗಳು ವ್ಯರ್ಥವಾಗಲಿವೆ.

ಕಾರವಾರದ ಕಡಲಲ್ಲಿ ಮೀನುಗಾರಿಕೆ ಮಾಡುವ ಬೋಟುಗಳ ಮಂಗಳೂರಿಗೆ ವಾಪಸಾಗುತ್ತಿವೆ. ಕಾರವಾರದಿಂದ ಮಂಗಳೂರಿಗೆ ವಾಪಸಾಗುವ ಮಾರ್ಗ ಮಧ್ಯೆ ಸಾವಿರಾರು ಲೀಟರ್ ಡಿಸೇಲ್ ಖರ್ಚಾಗುತ್ತದೆ. ಬಳಿಕ ಮಂಗಳೂರಿನಿಂದ ಕಾರವಾರಕ್ಕೆ ಬೋಟುಗಳನ್ನು ಸ್ಥಳಾಂತರಿಸುವಾಗ ಅಷ್ಟೇ ಖರ್ಚು ಬೋಟುಗಳ ಮಾಲಕರ ಜೋಬಿಗೆ ಕತ್ತರಿ ಹಾಕುತ್ತದೆ ಎನ್ನುತ್ತಾರೆ ಮೋಹನ್ ಬೆಂಗ್ರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News