×
Ad

ಪಿ.ಎ. ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಇನ್‍ಕ್ಯುಬೇಷನ್ ಸೆಂಟರ್ ಸ್ಥಾಪನೆ

Update: 2018-10-05 22:54 IST

ಕೊಣಾಜೆ, ಅ. 5: ಕೇಂದ್ರ ಮತ್ತು ರಾಜ್ಯ ಸರಕಾರದ ಮಹಾತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ವಿಜ್ಞಾನದ ಹೊಸ ಪದ್ಧತಿಯ ಅನ್ವೇಷಣೆ ಮತ್ತು ನವೋದ್ಯಮಗಳನ್ನು ರಚಿಸುವ ಯೋಜನೆಗಳನ್ನು ಕಾರ್ಯಗತಗೊಳಿಸಲು ನಗರದ ಪಿ.ಎ. ತಾಂತ್ರಿಕ ಮಹಾವಿದ್ಯಾಲಯದಲ್ಲಿ 4 ಕೋಟಿ ರೂ. ಸರಕಾರಿ ಅನುದಾನಗಳೊಂದಿಗೆ “ಬಿನ್ಸೆಸ್ ಇನ್‍ಕ್ಯುಬೇಟರ್’ನ್ನು ಸ್ಥಾಪಿಸಲಾಗಿದೆ. 

ಕೇಂದ್ರ ಸರಕಾರದ ಅಧೀನಕ್ಕೊಳಪಟ್ಟ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಸಹಾಯ ಕಾರ್ಯಗಳ ಮಂತ್ರಾಲಯವು ಈ ಕಾಲೇಜಿನ “ಇನ್‍ಕ್ಯುಬೇಟರ್”ಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಣ್ಣ ಮತ್ತು ಮಧ್ಯಮ ನವೋದ್ಯಮಗಳನ್ನು ಉತ್ತೇಜಿಸುವ ಸಲುವಾಗಿ ಸಹಾಯ ಕಾರ್ಯ ಪಡೆಯುವ ಮತ್ತು ವ್ಯವಸ್ಥಾಪಿಸುವ ಕಾರ್ಯ ಪಡೆಗಳ ವಿವರಗಳೊಂದಿಗೆ ಮುಂದಿನ ಮೂರು ವರುಷಗಳವರೆಗೆ 2.4 ಕೋಟಿ ರೂ. ಅನುದಾನ ನೀಡಲು ಅನುಮೋದಿಸಿದೆ.  ಈ “ಇನ್‍ಕ್ಯುಬೇಷನ್ ಸೆಂಟರ್”ನಲ್ಲಿ ಪ್ರತೀ ವರ್ಷ ಆಯ್ದ ಅತ್ಯುತ್ತಮ ಹತ್ತು ಹೊಸ ಪದ್ಧತಿಯನ್ನು ನವೋದ್ಯಮವಾಗಿ ಪರಿವರ್ತಿಸಲು ಪ್ರತಿಯೊಂದು ಯೋಜನೆಗೆ ಎಂಟು ಲಕ್ಷದವರೆಗೆ ಅನುದಾನ ನೀಡಲಾಗುವುದು ಎಂದು ಪ್ರಾಂಶುಪಾಲರಾದ ಡಾ. ಅಬ್ದುಲ್ ಷರೀಫ್ ತಿಳಿಸಿದರು. 

ಇದೇ ರೀತಿ ಕರ್ನಾಟಕ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ “ಸ್ಟಾರ್ಟ್‍ಪ್ ಪಾಲಿಸಿ - 2015”ನ ಯೋಜನೆಯಡಿ ನಮ್ಮ ಜಿಲ್ಲೆಯ ವಿದ್ಯಾರ್ಥಿಗಳನ್ನು ವಿಜ್ಞಾನದ ಹೊಸ ಪದ್ಧತಿಯ ಅನ್ವೇಷಣೆಯಲ್ಲಿ ತೊಡಗಿಸಿಕೊಳ್ಳುವಂತೆ ಉತ್ತೇಜಿಸುವ ಸಲುವಾಗಿ ಈ ಕಾಲೇಜಿನಲ್ಲಿ “ನ್ಯೂ ಏಜ್ ಇನ್‍ಕ್ಯುಬೇಷನ್ ಜಾಲ”ದ ಅಡಿ ಇನ್‍ಕ್ಯುಬೇಷನ್ ಸೆಂಟರ್” ಸ್ಥಾಪನೆಗೆ ಕರ್ನಾಟಕ ಸರಕಾರವು ಮುಂದಿನ ಮೂರು ವರುಷದವರೆಗೆ 1.2 ಕೋಟಿ ರೂಪಾಯಿಯ ಅನುದಾನಕ್ಕೆ ಅನುಮೋದನೆ ನೀಡಿದೆ. 

ಸ್ಪರ್ಧೆಯ ಮೂಲಕ ಪ್ರತೀ ವರ್ಷ 10 ಆಯ್ದ ಯೋಜನೆಗಳಿಗೆ ಮೂರು ಲಕ್ಷದವರೆಗೆ ಅನುದಾನ ನೀಡಲಾಗುವುದು.  ಈ ಎರಡು ಇನ್‍ಕ್ಯುಬೇಷನ್ ಸೆಂಟರ್ ನಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಮತ್ತು ನವೋದ್ಯಮ ಮಾಡಲಿಚ್ಚಿಸುವವರು ತಮ್ಮ ವೈಜ್ಞಾನಿಕ ಹೊಸ ಪದ್ಧತಿಯ ಯೋಜನೆಗಳೊಂದಿಗೆ ಮಾಹಿತಿಗಾಗಿ ಯೋಜನೆಯ ಸಂಯೋಜಕರಾದ ಡಾ. ಕೃಷ್ಣಪ್ರಸಾದ್ ನೂರಾಳ ಬೆಟ್ಟುರವರನ್ನು ಸಂಪರ್ಕಿಸಬಹುದಾಗಿದೆ.

ರಾಜ್ಯ ಸರಕಾರ ಪ್ರಾಯೋಜಿತ “ನ್ಯೂ ಏಜ್ ಇನ್‍ಕ್ಯುಬೇಷನ್ ಜಾಲ”ದ ಅಡಿಯಲ್ಲಿ ಪಿ.ಎ. ತಾಂತ್ರಿಕ ಮಹಾವಿದ್ಯಾಲಯದ “ಇನ್‍ಕ್ಯುಬೇಷನ್ ಸೆಂಟರ್”ನ ಪ್ರಯೋಜನ ಪಡೆಯಲಿಚ್ಚಿಸುವ ವಿದ್ಯಾರ್ಥಿಗಳು ತಮ್ಮ ವಿಜ್ಞಾನದ ನವ ಪದ್ಧತಿಯ ಯೋಜನೆಯನ್ನು ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪ್ರಸ್ತುತ ಪಡಿಸಿ ಗೆಲ್ಲಬೇಕಾಗುತ್ತದೆ. 

ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಉತ್ತಮ ಹತ್ತು ಯೋಜನೆಗಳಿಗೆ ತಲಾ 3 ಲಕ್ಷ ರೂಪಾಯಿಯ ಅನುದಾನ ನೀಡಲಾಗುವುದು.  ಇದರೊಂದಿಗೆ ಪಿ.ಎ. ತಾಂತ್ರಿಕ ಮಹಾವಿದ್ಯಾಲಯವು ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಿ ನಿರುದ್ಯೋಗ ನಿವಾರಿಸುವಂತಹ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅಭಿವೃದ್ಧಿಸುವಂತಹ ಸ್ಪರ್ಧೆಗಳನ್ನು ನಡೆಸಲು ಅನುದಾನವನ್ನು ಬಳಸಿಕೊಳ್ಳಲಾಗುವುದು. 

ಈ ಎರಡು “ಇನ್‍ಕ್ಯುಬೇಷನ್ ಸೆಂಟರ್” ನ ಸವಲತ್ತುಗಳ ಬಳಕೆಯ ಬಗ್ಗೆ ಮತ್ತು ನವ ವಿಜ್ಞಾನದ ಪೂರ್ವ ಸಿದ್ಧತೆಗಳ ಮಾಹಿತಿಗಾಗಿ ಸೆಂಟರ್ ಸಂಯೋಜಕರಾದ  ಡಾ. ಕೃಷ್ಣಪ್ರಸಾದ್ ನೂರಾಳಬೆಟ್ಟು ಅವರನ್ನು 9448529048 ನ ಮುಖಾಂತರ ಸಂಪರ್ಕಿಸಬಹುದಾಗಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News