ರಷ್ಯದೊಂದಿಗೆ ಶಸ್ತ್ರಾಸ್ತ್ರ ಖರೀದಿ ಒಪ್ಪಂದದ ಬೆನ್ನಲ್ಲೇ ಅಮೆರಿಕಕ್ಕೆ ಭಾರತದ ಇನ್ನೊಂದು ಗುದ್ದು

Update: 2018-10-05 17:53 GMT

ಹೊಸದಿಲ್ಲಿ,ಅ.5: ತನ್ನ ಮಾತನ್ನು ಕೇಳದ ರಾಷ್ಟ್ರಗಳಿಗೆ ಆರ್ಥಿಕ ನಿರ್ಬಂಧ ವಿಧಿಸುವುದಾಗಿ ಗುಟುರು ಹಾಕುತ್ತಲೇ ಇರುವ ವಿಶ್ವದ ದೊಡ್ಡಣ್ಣ ಅಮೆರಿಕಕ್ಕೆ ಭಾರತ ಸರಿಯಾದ ಜಾಗಕ್ಕೇ ಪೆಟ್ಟು ನೀಡಿದೆ. ಅಮೆರಿಕದ ನಿರ್ಬಂಧದ ಬೆದರಿಕೆಗಳನ್ನು ಕಡೆಗಣಿಸಿ ರಷ್ಯಾದಿಂದ ಐದು ಶತಕೋಟಿ ಮೌಲ್ಯದ ಶಸ್ತ್ರಾಸ್ತ್ರ ಖರೀದಿ ಒಪ್ಪಂದಕ್ಕೆ ಶುಕ್ರವಾರ ಸಹಿ ಹಾಕುವ ಮೂಲಕ ಅದಕ್ಕೆ ಮೊದಲ ಗುದ್ದು ನೀಡಿದ ಭಾರತ, ಇದರ ಬೆನ್ನಲ್ಲೇ ಇರಾನ್‌ನಿಂದ ತೈಲ ಆಮದನ್ನು ಮುಂದುವರಿಸಲು ನಿರ್ಧರಿಸುವ ಮೂಲಕ ಇನ್ನೊಂದು ಗುದ್ದು ನೀಡಿದೆ. ಇರಾನ್ ವಿರುದ್ಧ ಅಮೆರಿಕದ ಆರ್ಥಿಕ ದಿಗ್ಬಂಧನ ಜಾರಿಗೊಳ್ಳಲಿರುವ ನವೆಂಬರ್‌ನಲ್ಲಿ ಆ ರಾಷ್ಟ್ರದಿಂದ ಒಂಭತ್ತು ಮಿಲಿಯನ್ ಕಚ್ಚಾತೈಲವನ್ನು ಆಮದು ಮಾಡಿಕೊಳ್ಳಲು ಸರಕಾರಿ ಸ್ವಾಮ್ಯದ ತೈಲ ಸಂಸ್ಕರಣಾಗಾರಗಳು ಒಪ್ಪಂದ ಮಾಡಿಕೊಂಡಿವೆ.

ಅಮೆರಿಕವು ನ.4ರೊಳಗೆ ಇರಾನ್‌ನಿಂದ ತೈಲ ಆಮದನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಎಲ್ಲ ರಾಷ್ಟ್ರಗಳಿಗೆ ತನ್ನ ಬೆದರಿಕೆಯನ್ನು ಗುರುವಾರ ಪುನರುಚ್ಚರಿಸಿದ್ದರೂ ಭಾರತವು ಅದಕ್ಕೆ ಸೊಪ್ಪು ಹಾಕಿಲ್ಲ.

ಶುಕ್ರವಾರದ ಬೆಳವಣಿಗೆಗಳಿಗೆ ಅಮೆರಿಕವು ತುಂಬ ಎಚ್ಚರಿಕೆಯಿಂದ ಪ್ರತಿಕ್ರಿಯಿಸಿದೆ. ದಿಲ್ಲಿಯಲ್ಲಿರುವ ಅಮೆರಿಕದ ರಾಯಭಾರಿ ನೀಡಿರುವ ಮೊದಲ ಹೇಳಿಕೆಯಲ್ಲಿ,ನಿರ್ಬಂಧಗಳಿರುವುದು ಮಿತ್ರರನ್ನು ಅಥವಾ ಪಾಲುದಾರರನ್ನು ದಂಡಿಸಲು ಅಲ್ಲ ಎಂದು ತಿಳಿಸಿದೆ.

ಇರಾನ್‌ಗೆ ತೈಲಖರೀದಿ ಬಾಬ್ತು ಮೊತ್ತವನ್ನು ಡಾಲರ್‌ಗಳಲ್ಲಿ ಪಾವತಿಸಲು ಅಮೆರಿಕದ ನಿರ್ಬಂಧಗಳು ಅಡ್ಡಗಾಲು ಹಾಕುವುದರಿಂದ ಅದನ್ನು ರೂಪಾಯಿಗಳಲ್ಲಿ ಪಾವತಿಸಲು ಭಾರತ ಸರಕಾರವು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇರಾನ್ ಪಾಲಿಗೆ ಇದೇನೂ ಹೊಸತಲ್ಲ. ಹಿಂದೆಯೂ ಅದು ರೂಪಾಯಿಗಳಲ್ಲಿ ್ಲ ಹಣವನ್ನು ಸ್ವೀಕರಿಸಿದೆ. ಅದು ಈ ರೂಪಾಯಿಗಳನ್ನು ಭಾರತದಿಂದ ಔಷಧಿಗಳು ಮತ್ತು ಇತರ ಸರಕುಗಳನ್ನು ಆಮದು ಮಾಡಿಕೊಳ್ಳಲು ಬಳಸುತ್ತದೆ ಎಂದು ಮೂಲಗಳು ತಿಳಿಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News