ರಹಸ್ಯವಾಗಿ ಉಳಿದಿದೆ ಅಭ್ಯರ್ಥಿಗಳ ಹೆಸರು: ಕಾರಣವೇನು ಗೊತ್ತಾ ?
ಶ್ರೀನಗರ, ಅ.6: ರಾಜ್ಯದ ಎರಡು ಪ್ರಮುಖ ರಾಜಕೀಯ ಪಕ್ಷಗಳ ಬಹಿಷ್ಕಾರ, ಉಗ್ರರ ಬೆದರಿಕೆ, ಹಿಂಸಾಚಾರದ ಹಿನ್ನೆಲೆಯಲ್ಲಿ ಕನಿಷ್ಟ ಮತದಾನವಾಗುವ ಸಾಧ್ಯತೆಗಳೊಂದಿಗೆ ಜಮ್ಮು ಕಾಶ್ಮೀರದ ಸ್ಥಳೀಯ ಸಂಸ್ಥೆಗಳಿಗೆ ನಾಲ್ಕು ಹಂತಗಳಲ್ಲಿ ನಡೆಯುವ ಮತದಾನ ಪ್ರಕ್ರಿಯೆಗೆ ಸೋಮವಾರ(ಅ.8) ಚಾಲನೆ ದೊರೆಯಲಿದೆ.
ಜಮ್ಮು ಕಾಶ್ಮೀರದಲ್ಲಿ ಉಗ್ರರ ಬೆದರಿಕೆಯ ಕಾರಣ ಚುನಾವಣಾ ಅಭ್ಯರ್ಥಿಗಳ ಹೆಸರು, ಅವರು ಯಾವ ಪಕ್ಷದಿಂದ ಸ್ಪರ್ಧಿಸುತ್ತಾರೆ ಎಂಬಿತ್ಯಾದಿ ಮಾಹಿತಿಗಳನ್ನು ಅತ್ಯಂತ ರಹಸ್ಯವಾಗಿಡಲಾಗಿದೆ. ಪಕ್ಷಗಳ ಹೆಸರು ಮತ್ತು ಚಿಹ್ನೆಯನ್ನು ಮಾತ್ರ ಪ್ರಚಾರ ಕಾರ್ಯದಲ್ಲಿ ಬಳಸಲಾಗಿದೆ. ಅಲ್ಲದೆ ಯಾವುದೇ ಅಭ್ಯರ್ಥಿ ಚುನಾವಣಾ ಪ್ರಚಾರ ರ್ಯಾಲಿ ಅಥವಾ ಪೋಸ್ಟರ್‌ನಲ್ಲಿ ತನ್ನ ಹೆಸರು ನಮೂದಿಸಿಲ್ಲ. ಮನೆ ಮನೆ ಪ್ರಚಾರ ಕಾರ್ಯವೂ ನಡೆದಿಲ್ಲ.
ಸಂವಿಧಾನದ 35ಎ ಪರಿಚ್ಛೇದವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿರುವುದನ್ನು ವಿರೋಧಿಸಿ ರಾಜ್ಯದ ಪ್ರಮುಖ ಪಕ್ಷಗಳಾದ ನ್ಯಾಷನಲ್ ಕಾನ್ಫರೆನ್ಸ್(ಎನ್‌ಸಿ) ಮತ್ತು ಪೀಪಲ್ಸ್ ಡೆಮೊಕ್ರಾಟಿಕ್ ಪಾರ್ಟಿ(ಪಿಡಿಪಿ) ಹಾಗೂ ಸಿಪಿಐ(ಎಂ) ಚುನಾವಣೆಯಿಂದ ದೂರ ಉಳಿದಿವೆ. ಪ್ರತ್ಯೇಕತಾವಾದಿಗಳು ಮತದಾನವನ್ನು ಬಹಿಷ್ಕರಿಸಲು ಕರೆ ನೀಡಿದ್ದರೆ, ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವವರನ್ನು ಗುರಿಯಾಗಿಸಿ ಹತ್ಯಾ ದಾಳಿ ನಡೆಸುವುದಾಗಿ ಭಯೋತ್ಪಾದಕ ಸಂಘಟನೆಗಳು ಎಚ್ಚರಿಸಿವೆ. ಈ ಹಿನ್ನೆಲೆಯಲ್ಲಿ ಅತ್ಯಂಕ ಕನಿಷ್ಟ ಪ್ರಮಾಣದಲ್ಲಿ ಮತದಾನವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಅಭ್ಯರ್ಥಿಗಳಿಗೆ ರಕ್ಷಣೆ ನೀಡಿ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಆದರೆ ರಾಜ್ಯದಲ್ಲಿರುವ ಪರಿಸ್ಥಿತಿಯಲ್ಲಿ ಚುನಾವಣಾ ಪ್ರಚಾರಕಾರ್ಯ ನಡೆಸುವುದು ಅಸಾಧ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತದಾನ ಪ್ರಕ್ರಿಯೆ ಮುಕ್ತ, ಶಾಂತಿಯುತ ಮತ್ತು ಸುಗಮವಾಗಿ ಸಾಗಲು ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ. ಕೇಂದ್ರ ಸರಕಾರ ಕೇಂದ್ರ ಅರೆಸೇನಾ ಪಡೆಯ 400 ತುಕಡಿಗಳನ್ನು ರವಾನಿಸಿದೆ. ಆದರೆ ಪ್ರತಿಯೊಬ್ಬ ಅಭ್ಯರ್ಥಿಗೂ ಪ್ರತ್ಯೇಕವಾಗಿ ಭದ್ರತೆ ಒದಗಿಸುವುದು ಸಾಧ್ಯವಾಗದ ಮಾತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಗ್ರರ ಬೆದರಿಕೆ ಹಿನ್ನೆಲೆಯಲ್ಲಿ ಹಲವು ಅಭ್ಯರ್ಥಿಗಳು ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಶುಕ್ರವಾರ ರಾಜಕೀಯ ಪಕ್ಷವೊಂದರ ಇಬ್ಬರು ಕಾರ್ಯಕರ್ತರನ್ನು ಹಾಡಹಗಲೇ ಉಗ್ರರು ಹತ್ಯೆ ಮಾಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಓಟು ಕೇಳಲು ಹೋಗುವುದಾದರೂ ಹೇಗೆ ಎಂದು ಕಾಂಗ್ರೆಸ್ ಮುಖಂಡರು ಪ್ರಶ್ನಿಸಿದ್ದಾರೆ.