ಚೀನಾದಲ್ಲಿ ಇಂಟರ್‌ಪೋಲ್ ಅಧ್ಯಕ್ಷರ ಬಂಧನ?: ಮಾಧ್ಯಮ ವರದಿ
ಬೀಜಿಂಗ್, ಅ. 6: ಅಂತಾರಾಷ್ಟ್ರೀಯ ಪೊಲೀಸ್ ಜಾಲ ‘ಇಂಟರ್‌ಪೋಲ್’ ಅಧ್ಯಕ್ಷ ಮೆಂಗ್ ಹೊಂಗ್‌ವೀ ವಿರುದ್ಧದ ವಿಚಾರಣೆಯ ಭಾಗವಾಗಿ ಪ್ರಶ್ನಿಸಲು ಅವರನ್ನು ಚೀನಾದಲ್ಲಿ ಬಂಧಿಸಲಾಗಿದೆ ಎಂದು ಮಾಧ್ಯಮ ವರದಿಯೊಂದು ಶನಿವಾರ ಹೇಳಿದೆ.
64 ವರ್ಷದ ಮೆಂಗ್ ತನ್ನ ತವರು ದೇಶದಲ್ಲಿ ನಾಪತ್ತೆಯಾಗಿದ್ದಾರೆ ಎಂಬುದಾಗಿ ವರದಿಯಾದ ಒಂದು ದಿನದ ಬಳಿಕ ಈ ಬೆಳವಣಿಗೆ ಸಂಭವಿಸಿದೆ.
ಮೆಂಗ್, ಫ್ರಾನ್ಸ್‌ನಲ್ಲಿ ಪ್ರಧಾನ ಕಚೇರಿಯ ಹೊಂದಿರುವ ಅಂತರ್‌ರಾಷ್ಟ್ರೀಯ ಕಾನೂನು ಅನುಷ್ಠಾನ ಸಂಸ್ಥೆ ಇಂಟರ್‌ಪೋಲ್‌ನ ಪ್ರಥಮ ಚೀನಿ ಮುಖ್ಯಸ್ಥರಾಗಿದ್ದಾರೆ.
ಮೆಂಗ್ ಕಳೆದ ವಾರ ಚೀನಾದಲ್ಲಿ ಇಳಿದ ತಕ್ಷಣ ಪ್ರಶ್ನಿಸುವುದಕ್ಕಾಗಿ ಚೀನಿ ಅಧಿಕಾರಿಗಳು ಅವರನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಮೂಲವೊಂದನ್ನು ಉಲ್ಲೇಖಿಸಿ ಹಾಂಕಾಂಗ್‌ನ ‘ಸೌತ್ ಚೀನಾ ಮಾರ್ನಿಂಗ್ ಪೋಸ್ಟ್’ ವರದಿ ಮಾಡಿದೆ.
ಅವರ ವಿರುದ್ಧ ಯಾಕೆ ಅಥವಾ ಯಾವ ತನಿಖೆ ನಡೆಸಲಾಗುತ್ತಿದೆ ಹಾಗು ಅವರನ್ನು ಎಲ್ಲಿ ಇರಿಸಲಾಗಿದೆ ಎಂಬ ಮಾಹಿತಿ ಈವರೆಗೆ ಲಭ್ಯವಾಗಿಲ್ಲ.
ಚೀನಾದ ಸಾರ್ವಜನಿಕ ಭದ್ರತೆ ಸಚಿವಾಲಯದಲ್ಲಿ ಉಪ ಸಚಿವರೂ ಆಗಿರುವ ಮೆಂಗ್ ಚೀನಾದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ ಎಂದು ‘ಪೋಸ್ಟ್’ ಹೇಳಿದೆ.
ಮೆಂಗ್‌ರ ನಾಪತ್ತೆ ಬಗ್ಗೆ ಅವರ ಪತ್ನಿ ಫ್ರಾನ್ಸ್ ಪೊಲೀಸರಿಗೆ ದೂರು ಸಲ್ಲಿಸಿದ ಬಳಿಕ, ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಫ್ರಾನ್ಸ್ ಪೊಲೀಸರು ತಿಳಿಸಿದ್ದಾರೆ.
ಮೆಂಗ್ ಕೊನೆಯದಾಗಿ ಸೆಪ್ಟಂಬರ್ 29ರಂದು ಫ್ರಾನ್ಸ್‌ನಲ್ಲಿ ಕಾಣಿಸಿಕೊಂಡಿದ್ದರು. ಈವರೆಗೆ ಚೀನಾದ ಸಾರ್ವಜನಿಕ ಭದ್ರತೆ ಸಚಿವಾಲಯವಾಗಲಿ, ವಿದೇಶ ಸಚಿವಾಲಯವಾಗಲಿ ಮೆಂಗ್ ನಾಪತ್ತೆ ಬಗ್ಗೆ ಹೇಳಿಕೆ ನೀಡಿಲ್ಲ.
ಸೆಪ್ಟಂಬರ್ ಕೊನೆಯಲ್ಲಿ ಮೆಂಗ್ ಚೀನಾಕ್ಕೆ ಹೋಗಿದ್ದಾರೆ, ಆದರೆ, ಆ ಬಳಿಕ ಅವರು ಸಂಪರ್ಕಕ್ಕೆ ಬಂದಿಲ್ಲ ಎಂದು ಫ್ರಾನ್ಸ್‌ನ ವರದಿಗಳು ಹೇಳಿವೆ.