ಅಪ್ರಾಪ್ತ ಬಾಲಕಿಯ ಅಪಹರಣ ಪ್ರಕರಣ; ಗದಗ್‌ನಲ್ಲಿ ಆರೋಪಿಯ ಬಂಧನ; ಪೊಕ್ಸೊದಡಿ ಕೇಸು ದಾಖಲು
ಮಂಗಳೂರು, ಅ. 6: ದಾವಣಗೆರೆ ಮೂಲದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು ಪಾಂಡೇಶ್ವರ ಠಾಣಾ ಪೊಲೀಸರು ಬಂಧಿಸಿ, ಪೊಕ್ಸೊ ಪ್ರಕರಣದಡಿ ಕೇಸು ದಾಖಲಿಸಿದ್ದಾರೆ.
ಗದಗ್ ಜಿಲ್ಲೆಯ ಮುಳುಗುಂದದ ಚಿಂಚಲಿ ನಿವಾಸಿ ಸುನೀಲ್ (19) ಬಂಧಿತ ಆರೋಪಿ. ಈತ ಮಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಈತನಿಗೆ ದಾವಣಗೆರೆಯ ಅಪ್ರಾಪ್ತ ಬಾಲಕಿಯೊಬ್ಬಳ ಪರಿಚಯವಾಗಿ ಅದು ಪ್ರೇಮಕ್ಕೆ ತಿರುಗಿತ್ತು. ಬಳಿಕ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ 8 ತಿಂಗಳ ಹಿಂದೆ ಬೋಳಾರದಿಂದ ಅಪಹರಿಸಿದ್ದ.
ಬಾಲಕಿ ಕೂಡ ಬಿಲ್ಡಿಂಗ್‌ನಲ್ಲಿ ಕಾರ್ಮಿಕಳಾಗಿದ್ದು, ಬೋಳಾರದಲ್ಲಿರುವ ಚಿಕ್ಕಮ್ಮನ ಜತೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು. ಯುವಕ ಬಾಲಕಿಯನ್ನು ಅಪಹರಿಸಿದ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಆಕೆಯ ಪೋಷಕರು ದೂರು ನೀಡಿದ್ದರು.
ಆರೋಪಿ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಅಪಹರಣ ಹಾಗೂ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 15ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.