ಅಮೆರಿಕದ ಆರೋಪಗಳು ಚಾಡಿ ಮಾತು ಆಧಾರಿತ: ಚೀನಾ ತಿರುಗೇಟು

Update: 2018-10-06 16:56 GMT

ಬೀಜಿಂಗ್, ಅ. 6: ಅಮೆರಿಕದ ಚುನಾವಣೆಯಲ್ಲಿ ತಾನು ಹಸ್ತಕ್ಷೇಪ ನಡೆಸುತ್ತಿದ್ದೇನೆ ಎಂಬುದಾಗಿ ಆ ದೇಶದ ಉಪಾಧ್ಯಕ್ಷ ಮೈಕ್ ಪೆನ್ಸ್ ಮಾಡಿರುವ ಆರೋಪ ‘ದುರುದ್ದೇಶಪೂರಿತ ಹಾಗೂ ಕಪೋಲಕಲ್ಪಿತ ಮಾತುಗಳು’ ಎಂಬುದಾಗಿ ಚೀನಾ ಶುಕ್ರವಾರ ಬಣ್ಣಿಸಿದೆ.

ಅದೇ ವೇಳೆ, ಉಭಯ ದೇಶಗಳ ನಡುವೆ ಮುಂದುವರಿಯುತ್ತಿರುವ ವ್ಯಾಪಾರ ಸಮರವನ್ನು ಕೊನೆಗೊಳಿಸಲು ಅಮೆರಿಕದೊಂದಿಗೆ ‘ಒಂದು ಮಟ್ಟದ ರಾಜಿ ಮಾಡಿಕೊಳ್ಳುವ ಇಚ್ಛೆಯನ್ನು ಅದು ವ್ಯಕ್ತಪಡಿಸಿದೆ.

ಅಮೆರಿಕದ ಚುನಾವಣೆಯಲ್ಲಿ ಚೀನಾ ಹಸ್ತಕ್ಷೇಪ ನಡೆಸಿರುವುದಷ್ಟೇ ಅಲ್ಲ, ಅಮೆರಿಕನ್ನರಲ್ಲಿ ಜನಾಭಿಪ್ರಾಯವನ್ನು ಮೂಡಿಸಲೂ ಅದು ಪ್ರಯತ್ನಿಸುತ್ತಿದೆ ಎಂಬುದಾಗಿ ವಾಶಿಂಗ್ಟನ್‌ನಲ್ಲಿ ಬುಧವಾರ ಸಮಾರಂಭವೊಂದರಲ್ಲಿ ಮಾತನಾಡುತ್ತಿದ್ದ ಮೈಕ್ ಪೆನ್ಸ್ ಆರೋಪಿಸಿರುವುದನ್ನು ಸ್ಮರಿಸಬಹುದಾಗಿದೆ.

ಈ ಆರೋಪಗಳಿಗೆ ಪ್ರತಿಕ್ರಿಯಿಸಿ ಶುಕ್ರವಾರ ಹೇಳಿಕೆಯೊಂದನ್ನು ಹೊರಡಿಸಿದ ಚೀನಾ ವಿದೇಶ ಸಚಿವಾಲಯದ ವಕ್ತಾರೆ ಹುವಾ ಚುನ್‌ಯಿಂಗ್, ಚೀನಾದ ವಿರುದ್ಧ ಮಾಡಲಾಗುವ ಯಾವುದೇ ಅಪಪ್ರಚಾರ ವ್ಯರ್ಥ ಎಂದರು.

‘‘ಅಮೆರಿಕದ ಉಪಾಧ್ಯಕ್ಷರು ಮಾಡಿರುವ ಭಾಷಣದಲ್ಲಿ ಚೀನಾದ ದೇಶಿ ಮತ್ತು ವಿದೇಶ ನೀತಿಗಳ ವಿರುದ್ಧ ಅನಗತ್ಯ ಆರೋಪಗಳನ್ನು ಮಾಡಲಾಗಿದೆ. ಚೀನಾದ ವಿರುದ್ಧ ಯಾರೋ ಹೇಳಿರುವ ಚಾಡಿ ಮಾತುಗಳ ಆಧಾರದಲ್ಲಿ ಈ ರೀತಿಯ ಆರೋಪಗಳನ್ನು ಮಾಡಲಾಗಿದೆ ಹಾಗೂ ಶೂನ್ಯದಿಂದ ಏನನ್ನಾದರೂ ಸೃಷ್ಟಿಸುವ ಪ್ರಯತ್ನವಾಗಿದೆ’’ ಎಂದು ಹುವಾ ಹೇಳಿರುವುದಾಗಿ ಚೀನಾದ ಅಧಿಕೃತ ಮಾಧ್ಯಮ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News