×
Ad

‘ಎತ್ತಿನಹೊಳೆ’ ಶಿಲಾನ್ಯಾಸ ಖಂಡಿಸಿ ತೊಂದರೆ ನೀಡಿದ ಪ್ರಕರಣ: ಸಾಕ್ಷ್ಯಾಧಾರ ಕೊರತೆ; 21 ಆರೋಪಿಗಳು ಖುಲಾಸೆ

Update: 2018-10-06 22:34 IST

ಮಂಗಳೂರು, ಅ.6: ಎತ್ತಿನಹೊಳೆ ಯೋಜನೆ ಶಿಲಾನ್ಯಾಸ ಖಂಡಿಸಿ 2014 ಮಾ.3ರಂದು ನಡೆದ ಕರಾವಳಿ ಕರಾಳ ದಿನ ಜಿಲ್ಲಾ ಬಂದ್ ಸಂದರ್ಭ ಸುರತ್ಕಲ್ ಬಳಿ ರಸ್ತೆ ತಡೆ ನಡೆಸಿ ಸಾರ್ವಜನಿಕರಿಗೆ ಹಾಗೂ ಪ್ರಯಾಣಿಕರಿಗೆ ತೊಂದರೆ ಉಂಟು ಮಾಡಿದ ಪ್ರಕರಣ 2ನೇ ಜೆಎಂಎಫ್‌ಸಿ ನ್ಯಾಯಾಲಯ ದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ಶನಿವಾರ ಖುಲಾಸೆಗೊಂಡಿದೆ.

ಕರಾವಳಿ ಜೀವನದಿ ನೇತ್ರಾವತಿ ರಕ್ಷಣಾ ಸಮಿತಿ ಅಧ್ಯಕ್ಷರಾಗಿದ್ದ ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ಅವರನ್ನು ಪ್ರಕರಣದ ಮೊದಲ ಆರೋಪಿ ನ್ನಾಗಿಸಿದ್ದರು. ಎರಡನೇ ಆರೋಪಿಯಾಗಿ ಹಿಂದೂ ಜಾಗರಣ ವೇದಿಕೆಯ ಸತ್ಯಜಿತ್ ಸುರತ್ಕಲ್, ರೈತ ಸಂಘದ ಮುಖಂಡ ರೋಹೀದಾಸ್ ರೈ, ಪುರುಷೋತ್ತಮ ಚಿತ್ರಾಪುರ, ಪ್ರತಿಭಾ ಕುಳಾಯಿ ಸೇರಿದಂತೆ ಪ್ರಕರಣದ ಎಲ್ಲ 21 ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿ ತೀರ್ಪು ನೀಡಿದೆ.

ಆರೋಪ ಏನು?

ಸುರತ್ಕಲ್ ರಾಷ್ಟ್ರೀಯ ಹೆದ್ದಾರಿ 66ರ ಗೋವಿಂದದಾಸ್ ಕಾಲೇಜು ಬಳಿ ರಸ್ತೆಯಲ್ಲಿ ಸಾಗುವ ವಾಹನಗಳನ್ನು ಅಡ್ಡಗಟ್ಟಿ ತೊಂದರೆ ಉಂಟು ಮಾಡಿದ್ದಾರೆ. ಹಳೆಯ ಟೈರ್‌ಗಳಿಗೆ ಬೆಂಕಿ ಹಚ್ಚಿ ರಸ್ತೆ ತಡೆ ಉಂಟು ಮಾಡಿದ್ದಾರೆ. ರಸ್ತೆಯ ಮಧ್ಯ ಭಾಗದಲ್ಲಿ ಸಭೆ ನಡೆಸಿ ಓಡಾಡುವವರಿಗೆ ತೊಂದರೆ ಉಂಟು ಮಾಡಿದ್ದಾರೆ ಎಂದು ಸುರತ್ಕಲ್ ಪೊಲೀಸ್ ಠಾಣೆಯ ಅಂದಿನ ಇನ್‌ಸ್ಪೆಕ್ಟರ್ ನಟರಾಜ್ ಸ್ವಹಿತಾಸಕ್ತಿಯಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ, ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯ ಸರಿಯಾದ ಸಾಕ್ಷ್ಯಾಧಾರಗಳನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಅಭಿಪ್ರಾಯ ಪಟ್ಟು ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News