ವಿದ್ಯಾರ್ಥಿಗಳ ಸಾಧನೆಯ ಗುರುತಿಸುವಿಕೆ ಉತ್ತಮ ಬೆಳವಣಿಗೆ-ಸಂಜೀವ ಮಠಂದೂರು

Update: 2018-10-06 17:11 GMT

ಪುತ್ತೂರು, ಅ. 6: ವಿದ್ಯಾರ್ಥಿಗಳ ಸಾಧನೆಗಳನ್ನು ಗುರುತಿಸುವುದು ಉತ್ತಮ ಬೆಳವಣಿಗೆಯಾಗಿದ್ದು, ಪುತ್ತೂರು ತಾಲೂಕು ಪಂಚಾಯತ್‍ನ ಸ್ವಂತ ಅನುದಾನದಿಂದ ತಾಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿವಿಧ ಶಾಲೆಗಳ ಕ್ರೀಡಾ ಪ್ರತಿಭೆಗಳಿಗೆ ಕ್ರೀಡಾ ಸಮವಸ್ತ್ರಗಳನ್ನು ವಿತರಿಸುವ ಮುಖಾಂತರ ಅವರ ಕ್ರೀಡಾ ಪ್ರತಿಭೆಗಳಿಗೆ ಬೆಳೆಯಲು ಇನ್ನಷ್ಟು ಸ್ಫೂರ್ತಿ ನೀಡುತ್ತಿರುವುದು ಉತ್ತಮ ವಿಚಾರ  ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಅವರು ಶನಿವಾರ ಪುತ್ತೂರು ತಾ.ಪಂ ಸಭಾಂಗಣದಲ್ಲಿ ತಾಲೂಕು ಪಂಚಾಯತ್‍ನ ಅನುದಾನದಿಂದ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ತಾಲೂಕಿನ ವಿದ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರ ವಿತರಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸುವುದರಿಂದ ಅವರಿಗೆ ಪ್ರೋತ್ಸಾಹ ದೊರಕುವಂತಾಗುತ್ತದೆ. ಅವರ ಮುಂದಿನ ಬದುಕಿಗೆ ಪ್ರೇರಣೆಯಾಗುತ್ತದೆ ಎಂದ ಅವರು ತಾಲೂಕಿನ ವಿವಿಧ ಶಾಲೆಗಳ 113 ವಿದ್ಯಾರ್ಥಿಗಳಿಗೆ ಸುಮಾರು 80,000 ವೆಚ್ಚದಲ್ಲಿ ಸಮವಸ್ತ್ರ ವಿತರಿಸುತ್ತಿದ್ದು ನಿಮ್ಮ ಸಾಧನೆ ಜಿಲ್ಲೆಯಿಂದ ರಾಜ್ಯ, ರಾಷ್ಟ್ರಮಟ್ಟದಲ್ಲಿ ಬೆಳಗಿ ಬರಲಿ. ನಿಮ್ಮ ಸಾಧನೆಯ ಮೂಲಕ ಅವರನ್ನು ತಯಾರಿಸಿದ ಆಸೆ ಈಡೇರಿಸಬೇಕು. ವಿದ್ಯಾರ್ಥಿಗಳು ಸಮವಸ್ತ್ರಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಎಲ್ಲಾ ಕ್ರೀಡಾಕೂಟಗಳಲ್ಲಿಯೂ ತಾ.ಪಂ ನೀಡಿದ ಸಮವಸ್ತ್ರಗಳಲ್ಲಿ ಭಾಗವಹಿಸಿ ಸಾಧನೆ ಮಾಡಿದಾಗ ಯೋಜನೆ ಸಾರ್ಥಕವಾಗಲು ಸಾಧ್ಯ ಎಂದು ಹೇಳಿದರು.

ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ತಾಲೂಕನ್ನು ಪ್ರತಿನಿಧಿಸುವ ಎಲ್ಲಾ ವಿದ್ಯಾರ್ಥಿಗಳನ್ನು ಸಮಾನ ವಾಗಿ ಕಾಣುವ ಉದ್ದೇಶದಿಂದ ತಾ.ಪಂನಿಂದ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲಾಗುತ್ತಿದೆ. ಇದನ್ನು ಸದುಪಯೋಗಪಡಿಸಿಕೊಂಡು ಜಿಲ್ಲೆಯಲ್ಲಿ ತಾಲೂಕಿನ ಕೀರ್ತಿಯನ್ನು ಎತ್ತಿ ಹಿಡಿಯಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ತಾ.ಪಂ ಅಧ್ಯಕ್ಷೆ ಭವಾನಿ ಚಿದಾನಂದ ಮಾತನಾಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ತಾ.ಪಂನಿಂದ ಸದಸ್ಯರ ಸಹಕಾರದಿಂದ ರೂ.80,000 ವೆಚ್ಚದಲ್ಲಿ ವಿದ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರ ವಿತರಿಸಲಾಗುತ್ತಿದೆ. ತಾಲೂಕಿನ ವಿದ್ಯಾರ್ಥಿಗಳ ಪ್ರತಿಭೆ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಬೆಳಗುವಂತಾಗಲಿ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯ ಡಿ.ಎನ್ ಸಂದರ್ಭೋಚಿತವಾಗಿ ಮಾತನಾಡಿದರು. ತಾ.ಪಂ ಉಪಾಧ್ಯಕ್ಷೆ ರಾಜೇಶ್ವರಿ, ಸ್ಥಾಯಿ ಸಮಿತಿ ಅಧ್ಯಕ್ಷ ಹರೀಶ್ ಬಿಜತ್ರೆ, ಸದಸ್ಯರಾದ ಮೀನಾಕ್ಷಿ ಮಂಜುನಾಥ, ಸಾಜ ರಾಧಾಕೃಷ್ಣ ಆಳ್ವ, ಮುಕುಂದ, ಜಯಂತಿ ಆರ್ ಗೌಡ, ಶಿವರಂಜನ್, ತೇಜಸ್ವಿನಿ, ಲಲಿತಾ, ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆರ್.ಸಿ ನಾರಾಯಣ ಉಪಸ್ಥಿತರಿದ್ದರು.

ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ ಸ್ವಾಗತಿಸಿದರು. ಭಕ್ತಕೋಡಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಪುಷ್ಪಾವತಿ ಕಾರ್ಯಕ್ರಮ ನಿರೂಪಿಸಿ, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷೆ ಐರಿಗ್ರೆಟ್ಟಾ ಪಾಯಸ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News