ಸಮುದಾಯಗಳ ಭಿನ್ನತೆಯನ್ನು ತೊಡೆದು ಹಾಕಲು ಕ್ರೀಡೆ ಸಹಕಾರಿ: ಸಂಜೀವ ಮಠಂದೂರು

Update: 2018-10-07 12:33 GMT

ಪುತ್ತೂರು, ಅ. 7: ದಸರಾ ಆಚರಣೆಯು ನಾಡಿದ ಸಾಂಸ್ಕೃತಿಕ ಬದುಕನ್ನು ಅನಾವರಣಗೊಳಿಸುವುದರೊಂದಿಗೆ ಕ್ರೀಡಾ ಕ್ಷೇತ್ರಕ್ಕೂ ಪಸರಿಸುವ ಮೂಲಕ ಒಗ್ಗಟ್ಟು ಮೂಡಿಸುವ ಪ್ರಯತ್ನ ನಡೆಸುತ್ತಿದೆ. ಸಮುದಾಯಗಳ ಭಿನ್ನತೆಯನ್ನು ತೊಡೆದು ಹಾಕಲು ಕ್ರೀಡೆ ಸಹಕಾರಿಯಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. 

ಅವರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಲೂಕು ಪಂಚಾಯತ್ ಪುತ್ತೂರು, ನಗರ ಸಭೆ ಪುತ್ತೂರು. ತಾಲೂಕು ಯುವಜನ ಒಕ್ಕೂಟ, ಸಂತ ಫಿಲೋಮಿನಾ ಕಾಲೇಜು, ಕೊಂಬೆಟ್ಟು ಸರ್ಕಾರಿ ಪ.ಪೂ. ಕಾಲೇಜು ಹಾಗೂ ವಿಷ್ಣು ಯುವಕ ಮಂಡಲದ ಸಹಯೋಗದಲ್ಲಿ ಭಾನುವಾರ ಪುತ್ತೂರು ತಾಲೂಕು ಕ್ರೀಡಾಂಗಣದಲ್ಲಿ ನಡೆದ ತಾಲೂಕು ದಸರಾ ಕ್ರೀಡಾಕೂಟದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ದಸರಾ ಆಚರಣೆಯು ಕ್ರೀಡೆಯನ್ನು ಆವರಿಸಿಕೊಂಡು ಸಮಾಜವನ್ನು ಒಗ್ಗಟ್ಟಿನಿಂದ ಮುನ್ನಡೆಯುವಂತೆ ಮಾಡಿದೆ. ದಸರಾ ಕ್ರೀಡಾಕೂಟದ ಸಂದರ್ಭ ಕುಸ್ತಿಪಟುಗಳನ್ನು ನೆನಪಿಸಿಕೊಳ್ಳಬೇಕು. ಇಂತಹ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಸ್ಪರ್ಧಿಗಳು ಪ್ರಶಸ್ತಿ ಕಡೆ ಗಮನ ಕೊಡದೆ ಪಂದ್ಯಾಟದ ಕಡೆಗೆ ಮಾತ್ರ ಗಮನ ಕೊಡಬೇಕು. ಇದರಿಂದ ಲವಲವಿಕೆಯೊಂದಿಗೆ ಸ್ಪರ್ಧೆಯಲ್ಲಿ ಮುಂದುವರಿದು ಯಶಸ್ವಿಯಾಗಲು ಸಾಧ್ಯವಿದೆ ಎಂದರು.

ಕ್ರೀಡಾಕೂಟವನ್ನು ಉದ್ಘಾಟಿಸಿದ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ ಪ್ರಾಕೃತಿಕ ವಿಕೋಪ ಹಿನ್ನೆಲೆಯಲ್ಲಿ ದಸರಾ ಕ್ರೀಡಾಕೂಟವನ್ನೇ ನಿಲ್ಲಿಸುವ ಯೋಚನೆಗಳಿತ್ತು. ಆದರೆ ಯಾವುದೇ ಕಾರಣಕ್ಕೂ ಕ್ರೀಡಾಕೂಟ ನಿಲ್ಲಬಾರದು ಎಂಬ ನಿಟ್ಟಿನಲ್ಲಿ ಕೇವಲ ಅದ್ದೂರಿತನಕ್ಕಷ್ಟೇ ಕಡಿವಾಣ ಹಾಕುವ ಮೂಲಕ ಕ್ರೀಡಾಕೂಟವನ್ನು ನಡೆಸಲಾಗುತ್ತಿದೆ. ಕ್ರೀಡಾಕೂಟ ಅಭಿವೃದ್ಧಿ ಆಗಬೇಕಾದರೆ ಕ್ರೀಡಾಂಗಣಗಳು ಅಭಿವೃದ್ಧಿ ಆಗಬೇಕಿದೆ. ಜಿಲ್ಲಾ ಮಟ್ಟದ ಕ್ರೀಡಾಪಟುಗಳಿಗೆ ರಾಜ್ಯ ಮಟ್ಟದಲ್ಲಿ ಉಚಿತ ಕೋಚಿಂಗ್ ನೀಡಲಾಗುವುದು ಹಾಗೂ ಶಿಕ್ಷಣ ವೆಚ್ಚವನ್ನು ಭರಿಸಲಾಗುವುದು ಎಂದರು.

ಕ್ರೀಡಾಜ್ಯೋತಿ ಹಸ್ತಾಂತರಿಸಿ ಮಾತನಾಡಿದ ಜಿ.ಪಂ. ಶಿಕ್ಷಣ, ಆರೋಗ್ಯ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ ಮಾತನಾಡಿ ತಾಲೂಕು ಕ್ರೀಡಾಂಗಣದ ಅಭಿವೃದ್ಧಿ ಹಿನ್ನೆಲೆಯಲ್ಲಿ ಯೋಚಿಸಬೇಕಾಗಿದೆ. ಈ ಮೂಲಕ ಕ್ರೀಡಾಪಟುಗಳನ್ನು ಬೆಳೆಸುವ ಕೆಲಸ ಆಗಬೇಕು. ದಸರಾ ಕ್ರೀಡಾಕೂಟಗಳಿಂದ ಸೌಹಾರ್ದತೆ ಬೆಳೆಯಲು ಸಾಧ್ಯ. ಮಕ್ಕಳಿಗೆ ಸರಿಯಾದ ಪ್ರೋತ್ಸಾಹ, ಸಹಕಾರ ನೀಡಬೇಕಿದೆ ಎಂದರು.

ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಪಟು ಚಂದ್ರಶೇಖರ್ ಹಾಗೂ ರಾಜ್ಯ ಯುವಜನ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು ಅವರನ್ನು ಶಾಸಕರು ಸನ್ಮಾನಿಸಿ ಗೌರವಿಸಿದರು. 3000 ಮೀ. ಓಟದಲ್ಲಿ ಪ್ರಥಮ ಸ್ಥಾನ ಪಡೆದ ಮಂಜುಶ್ರೀ, ದ್ವಿತೀಯ ಸ್ಥಾನ ಪಡೆದ ಜಯಶ್ರೀ, ತೃತೀಯ ಸ್ಥಾನ ಪಡೆದ ಹರ್ಷಿತಾ ಹಾಗೂ 5000 ಮೀ. ಓಟದಲ್ಲಿ ಪ್ರಥಮ ಸ್ಥಾನ ಪಡೆದ ಹರ್ಷಿತ್ ಕೆ., ದ್ವಿತೀಯ ಸ್ಥಾನ ಪಡೆದ ಅಕ್ಷಯ್ ಕೆ.ಎಸ್., ತೃತೀಯ ಸ್ಥಾನ ಪಡೆದ ನಿಶಾಲ್ ಅವರನ್ನು ವಿಜಯವೇದಿಕೆಗೆ ಆಹ್ವಾನಿಸಿ ಪದಕ ನೀಡಿ ಗೌರವಿಸಲಾಯಿತು.

ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ್ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಸದಸ್ಯ ಪಿ.ಜಿ. ಜಗನ್ನಿವಾಸ್ ರಾವ್,  ಯುವ ಸಬಲೀಕರಣ ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿಸೋಜಾ, ಎನ್‍ಐಎಸ್ ರಾಷ್ಟ್ರೀಯ ವಾಲಿಬಾಲ್ ತರಬೇತುದಾರ ನಾರಾಯಣನ್ ಪಿ.ವಿ., ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಕೃಷ್ಣಪ್ಪ, ಉಪ್ಪಳಿಗೆ ಶ್ರೀ ವಿಷ್ಣು ಯುವಕ ಮಂಡಲ ಸ್ಥಾಪಕಾಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷೆ ಐವಿ ಗ್ರೆಟ್ಟಾ ಪಾಯಸ್, ದಯಾನಂದ್ ರೈ ಕೋರ್ಮಂಡ, ತಾ.ಪಂ. ಸದಸ್ಯ ಸಾಜ ರಾಧಾಕೃಷ್ಣ ಆಳ್ವ, ಕ್ರೀಡಾಕೂಟದ ಸಂಯೋಜಕಿ ಗೀತಾಮಣಿ ಮತ್ತಿತರರು ಉಪಸ್ಥಿತರಿದ್ದರು.

ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾ„ಕಾರಿ ಮಾಮಚ್ಚನ್ ಎಂ. ಸ್ವಾಗತಿಸಿದರು.  ವಿಷ್ಣು ಯುವಕ ಮಂಡಲ ಅಧ್ಯಕ್ಷ ಚೇತನ್ ಉಪ್ಪಳಿಗೆ ವಂದಿಸಿದರು. ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News