×
Ad

ಬಾಲ್ಯವಿವಾಹ ಪ್ರಕರಣಗಳಲ್ಲಿ ಉಡುಪಿ ಜಿಲ್ಲೆಗೆ ಕೊನೆಯ ಸ್ಥಾನ: ವೆಂಕಟೇಶ ನಾಯ್ಕಾ

Update: 2018-10-07 19:49 IST

ಉಡುಪಿ, ಅ.7: ಉಡುಪಿ ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣಗಳು ಕಡಿಮೆ ಇದ್ದು, ರಾಜ್ಯದಲ್ಲೇ ಕೊನೆಯ ಸ್ಥಾನದಲ್ಲಿದೆ. ಜಿಲ್ಲೆಯ ಜನರಿಗೆ ಬಾಲ್ಯ ವಿವಾಹದ ದುಷ್ಪರಿಣಾಮಗಳ ಕುರಿತು ಅರಿವು ಇದೆ. ಆದರೆ ರಾಜ್ಯದಲ್ಲಿ ಅನೇಕ ಜಿಲ್ಲೆಯ ಈ ಬಗ್ಗೆ ಅರಿವಿನ ಕೊರತೆ ಇದೆ ಎಂದು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ವೆಂಕಟೇಶ ನಾಯ್ಕಾ ಟಿ. ಹೇಳಿದ್ದಾರೆ.

ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅಭಿಯೋಗ ಇಲಾಖೆ, ಆರಕ್ಷಕ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಗಳ ಸಹಯೋಗದಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ 2006, ಬಾಲ್ಯ ವಿಹಾಹ ನಿಷೇಧ(ಕರ್ನಾಟಕ ತಿದ್ದುಪಡಿ) ಕಾಯ್ದೆ 2016 ಮತ್ತು ಬಾಲ್ಯ ವಿಹಾಹ ನಿಷೇಧ ಕರ್ನಾಟಕ ನಿಯಮಾವಳಿಗಳು 2014ರ ಕುರಿತು ಬಾಲ್ಯ ವಿವಾಹ ನಿಷೇಧಾಧಿ ಕಾರಿಗಳು ಮತ್ತು ನ್ಯಾಯಾಧೀಶರುಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ರವಿವಾರ ಆಯೋಜಿಸಲಾದ ಸಂವಾದ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು.

ಅನಿಷ್ಠ ಪದ್ದತಿಯಾಗಿರುವ ಬಾಲ್ಯ ವಿವಾಹ ಮಕ್ಕಳ ಹಕ್ಕುಗಳಿಗೆ ಚ್ಯುತಿಯಾಗು ತ್ತಿದೆ. ಬಡತನ, ಅನಕ್ಷರತೆ, ಆರ್ಥಿಕ ಸಮಸ್ಯೆಗಳು ಮತ್ತು ಮೂಢ ನಂಬಿಕೆಗಳು ಬಾಲ್ಯ ವಿವಾಹಕ್ಕೆ ಪ್ರಮುಖ ಕಾರಣಗಳಾಗಿವೆ. ಬಾಲ್ಯ ವಿವಾಹದಿಂದ ಶಾಲೆ ಬಿಡುವ ಮಕ್ಕಳ ಸಂಖ್ಯೆ ಅಧಿಕವಾಗುತ್ತಿದ್ದು ಮಕ್ಕಳು ಶಿಕ್ಷಣದಿಂದ ವಂಚಿತ ರಾಗುತ್ತಿದ್ದಾರೆ. ಅಲ್ಲದೇ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತ ಗೊಳ್ಳುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಬಾಲ್ಯ ವಿವಾಹ ಮಾಡಿಸುವವರಿಗೆ 1 ರಿಂದ 2 ವರ್ಷದವರೆಗೆ ಕಾರಾಗೃಹ ಶಿಕ್ಷೆ ಮತ್ತು 1 ಲಕ್ಷದ ವರೆಗೆ ದಂಡ ವಿಧಿಸಲಾಗುತ್ತದೆ. ಬಾಲ್ಯ ವಿವಹ ತಡೆಗೆ ಹಲವು ಕಾನೂನುಗಳಿದ್ದರೂ ಕೂಡ ಸಮಾಜದಲ್ಲಿ ಇನ್ನೂ ಸಹ ಈ ಪದ್ದತಿ ಮುಂದುವರೆದಿದೆ. ಈ ಕುರಿತಂತೆ ಸಮಾಜದಲ್ಲಿ ಅರಿವು ಮೂಡಿಸಬೇಕಾಗಿದೆ, ಪ್ರತಿ ಜಿಲ್ಲಾ ಮಟ್ಟದಲ್ಲಿ ಬಾಲ್ಯ ವಿವಾಹ ತಡೆಗೆ ಘಟಕಗಳಿದ್ದು, ಬಾಲ್ಯ ವಿವಾಹ ನಿಷೇಧಾಧಿಕಾರಿಗಳಿದ್ದು, ಬಾಲ್ಯ ವಿವಾಹ ತಡೆಯುವಲ್ಲಿ ಎಲ್ಲಾ ಅಧಿಕಾರಿಗಳು ಮತ್ತು ನಾಗರಿಕರೂ ಕಾರ್ಯ ನಿರ್ವಹಿಸಬೇಕು ಎಂದು ಅವರು ತಿಳಿಸಿದರು.

ಮುಖ್ಯ ಅತಿಥಿಯಾಗಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಡಾ.ವನಿತಾ ಎನ್.ತೊರವಿ ಮಾತನಾಡಿ, ಬಾಲ್ಯ ವಿವಾಹ ದೇಶಕ್ಕೆ ಒಂದು ಪಿಡುಗು. ಹೆಣ್ಣು ಮಕ್ಕಳ ಪರವಾಗಿ ಅನೇಕ ಕಾನೂನುಗಳಿದ್ದರೂ ಬಾಲ್ಯ ವಿವಾಹ ಸೇರಿದಂತೆ ಸಾಕಷ್ಟು ದೌರ್ಜನ್ಯಗಳು ಅವರ ಮೇಲೆ ನಡೆಯುತ್ತಲೇ ಇವೆ. ಇದನ್ನು ನಿಯಂತ್ರಿಸುವ ಕಾರ್ಯ ಆಗಬೇಕು. ಉಡುಪಿ ಜಿಲ್ಲೆಯಲ್ಲಿ ವಾಸವಾಗಿರುವ ವಲಸೆ ಕಾರ್ಮಿಕರಲ್ಲಿ ಬಾಲ್ಯವಿವಾಹ ಕಂಡುಬರುತ್ತಿದೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ಬ.ನಿಂಬರಗಿ ಅಧ್ಯಕ್ಷತೆ ವಹಿಸಿ ದ್ದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಉಡುಪಿ ಜಿಲ್ಲಾ ಸರಕಾರಿ ಅಭಿಯೋಜಕಿ ಶಾಂತಿ ಬಾಯಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್ ಉಪಸ್ಥಿತರಿದ್ದರು. ಹಿರಿಯ ಸಿವಿಲ್ ನ್ಯಾಯಾಧೀಶೆ ಲತಾ ಸ್ವಾಗತಿಸಿದರು. ಉಡುಪಿ ಶಿಶು ಅಭಿವೃದ್ದಿ ಯೋಜನಾಧಿಕಾರಿ ವೀಣಾ ವಿವೇಾನಂದ ಕಾರ್ಯಕ್ರಮ ನಿರೂಪಿಸಿದರು.

ರಾಜ್ಯ ಮಕ್ಕಳ ರಕ್ಷಣಾ ಆಯೋಗದಿಂದ ರಾಜ್ಯದಲ್ಲಿ ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆ ನಡೆಸಿದ್ದು, 1,75000 ಮಕ್ಕಳನ್ನು ಗುರುತಿಸಲಾಗಿದೆ. ಈ ಮಕ್ಕಳಲ್ಲಿ ಬಾಲ್ಯ ವಿವಾಹ ಕೂಡ ಶಾಲೆ ಬಿಡಲು ಪ್ರಮುಖ ಕಾರಣವಾಗಿದೆ. ಆಯೋಗಕ್ಕೆ ದೂರವಾಣಿ ಮೂಲಕ ಬರುವ ದೂರುಗಳ ಕುರಿತಂತೆ ತಕ್ಷಣ ಕ್ರಮ ಕೈಗೊಂಡು ಬಾಲ್ಯ ವಿವಾಹಗಳನ್ನು ನಿಲ್ಲಿಸಲಾಗಿದೆ. ಗ್ರಾಪಂ ಮಟ್ಟದಿಂದಲೂ ಕೂಡ ಬಾಲ್ಯ ವಿವಾಹ ನಿಷೇದ ತಡೆಗಟ್ಟುವ ಕುರಿತು ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಆಯೋಗದ ಸದಸ್ಯೆ ಡಾ.ವನಿತಾ ಎನ್. ತೊರವಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News