×
Ad

ನವೆಂಬರ್‌ನಲ್ಲಿ ಪಿಲಿಕುಳದಲ್ಲಿ ಬ್ಯಾಟರಿ ಚಾಲಿನ ವಾಹನ ಸೇವೆ ಆರಂಭ: ಸಿಇಒ ಪ್ರಸನ್ನ

Update: 2018-10-07 19:59 IST

ಮಂಗಳೂರು, ಅ.7: ರಾಜ್ಯದ ಪ್ರತಿಷ್ಠಿತ ನಿಸರ್ಗಧಾಮ ಎಂದು ಹೆಗ್ಗಳಿಕೆ ಪಡೆದುಕೊಂಡ ಪಿಲಿಕುಳ ಡಾ. ಶಿವರಾಮ ಕಾರಂತ ನಿಸರ್ಗಧಾಮದಲ್ಲಿ ನವೆಂಬರ್ ಮೊದಲ ವಾರದಿಂದ ಪ್ರವಾಸಿಗರ ಅನುಕೂಲತೆ ದೃಷ್ಟಿಯಿಂದ ಬಗ್ಗೀಸ್ (ಬ್ಯಾಟರಿ ಚಾಲಿತ ವಾಹನ) ಸೇವೆ ಆರಂಭವಾಗಲಿದೆ ಎಂದು ಪಿಲಿಕುಳ ನಿಸರ್ಗಧಾಮದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ತಿಳಿಸಿದರು.

ಪಿಲಿಕುಳ ನಿಸರ್ಗಧಾಮದಲ್ಲಿ ರವಿವಾರ ನಡೆದ ವನ್ಯಜೀವಿ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪಿಲಿಕುಳ ಪ್ರವಾಸಿ ತಾಣವು 300ಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ಆವರಿಸಿಕೊಂಡಿದೆ. ಇದರಲ್ಲಿ ಜೈವಿಕ ಉದ್ಯಾನವನ, ವಿಜ್ಞಾನ ಕೇಂದ್ರ, ಪಾರ್ಕ್, ಗುತ್ತಿನ ಮನೆ, ಕರಕುಶಲ ಗ್ರಾಮ ಸಹಿತ ನಾನಾ ವೀಕ್ಷಣೀಯ ಸ್ಥಳಗಳಿವೆ. ಪ್ರವಾಸಿಗರಿಗೆ ಒಂದೆಡೆಯಿಂದ ಮತ್ತೊಂದೆಡೆ ನಡೆದುಕೊಂಡು ಹೋಗಿ ವೀಕ್ಷಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಪಿಲಿಕುಳದ ಸಮಗ್ರ ವೀಕ್ಷಣೆಗೆ ಬ್ಯಾಟರಿ ಚಾಲಿತ ‘ಬಗ್ಗೀಸ್’ ಎಂಬ ವಾಹನ ವ್ಯವಸ್ಥೆ ಮಾಡಲಾಗುತ್ತಿದೆ. ನವೆಂಬರ್ ಮೊದಲ ವಾರದಿಂದ 14 ವಾಹನಗಳನ್ನು ಅಳವಡಿಕೆ ಮಾಡಲಾಗುವುದು. ಈಗ ಜೈವಿಕ ಉದ್ಯಾನವನದಲ್ಲಿ ಮಾತ್ರ ಖಾಸಗಿ ಬಗ್ಗೀಸ್ ಸೇವೆ ಲಭ್ಯವಿದ್ದು, ನವೆಂಬರ್‌ನಿಂದ ಪಿಲಿಕುಳ ಆಡಳಿತ ಮಂಡಳಿಯಿಂದಲೇ ಈ ಸೇವೆ ಆರಂಭವಾಗಲಿದೆ. ಪ್ರವಾಸಿಗರು ಮುಖ್ಯದ್ವಾರದಲ್ಲಿ ತಾವು ಬಂದ ವಾಹನ ನಿಲ್ಲಿಸಿ, ಬಳಿಕ ಬಗ್ಗೀಸ್ ಬಳಸಿ ಪಿಲಿಕುಳ ವೀಕ್ಷಣೆ ಮಾಡಬಹುದಾಗಿದೆ ಎಂದು ಪ್ರಸನ್ನ ಹೇಳಿದರು.

ಅದಲ್ಲದೆ ಪಿಲಿಕುಳ ಪ್ರಾಧಿಕಾರ ರಚನೆಗೆ ಸರಕಾರ ಈಗಾಗಲೇ ಅಧಿಸೂಚನೆ ಹೊರಡಿಸಿದ್ದು, ನಡಾವಳಿಗಳ ಸಿದ್ಧತೆ ನಡೆಯುತ್ತಿದೆ. ಹಾಗಾಗಿ ಪಿಲಿಕುಳ ನಿಸರ್ಗಧಾಮವು 2 ತಿಂಗಳೊಳಗೆ ಪ್ರಾಧಿಕಾರವಾಗಿ ರೂಪುಗೊಳ್ಳಲಿದೆ ಎಂದು ಪ್ರಸನ್ನ ಮಾಹಿತಿ ನೀಡಿದರು.

ಯೆನೆಪೊಯ ಕಾಲೇಜಿನ ಡೀನ್ ಅಖ್ತರ್ ಹುಸೇನ್ ಮಾತನಾಡಿ, ವನ್ಯಜೀವಿಗಳ ಬಗ್ಗೆ ಅರಿವು, ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವನ್ಯಜೀವಿ ಸಪ್ತಾಹ ಒಳ್ಳೆಯ ಕಾರ್ಯಕ್ರಮವಾಗಿದೆ. ಇದರಲ್ಲಿ ಅಧಿಕ ಸಂಖ್ಯೆಯ ಜನರು ಭಾಗವಹಿಸಿ, ವನ್ಯಜೀವಿಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರು.

ಕಾರ್ಯಕ್ರಮವನ್ನು ಹಿರಿಯ ಕಲಾವಿದ ಗಣೇಶ್ ಸೋಮಯಾಜಿ ಚಿತ್ರ ಬಿಡಿಸುವ ಮೂಲಕ ಉದ್ಘಾಟಿಸಿದರು. ವೇದಿಕೆಯಲ್ಲಿ ಜೈವಿಕ ಉದ್ಯಾನವನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ, ವಿಜ್ಞಾನ ಕೇಂದ್ರದ ನಿರ್ದೇಶಕ ಕೆ.ವಿ. ರಾವ್, ಸುಬ್ಬಯ್ಯ ಶೆಟ್ಟಿಘಿ ಮತ್ತಿತರರು ಉಪಸ್ಥಿತರಿದ್ದರು. ಬಾಬು ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

ವನ್ಯಜೀವಿ ಸಪ್ತಾಹದ ಅಂಗವಾಗಿ ಮಕ್ಕಳಿಗೆ ಚಿತ್ರಬಿಡಿಸುವ ಸ್ಪರ್ಧೆ, ಛದ್ಮವೇಷ ಸ್ಪರ್ಧೆ, ವನ್ಯಜೀವಿ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News