×
Ad

ಡಿವಿಜಿ ಸಾಹಿತ್ಯದ ಬಗ್ಗೆ ವಿಸ್ತೃತ ಚರ್ಚೆ ನಡೆದಿಲ್ಲ: ಎಸ್.ದಿವಾಕರ್

Update: 2018-10-07 20:02 IST

ಮಂಗಳೂರು, ಅ.7: ಜೀವನದ ಎಲ್ಲ ಆಗುಹೋಗುಗಳ ಬಗ್ಗೆ ಡಿವಿಜಿ ಬರೆದಿದ್ದಾರೆ. ಆದರೆ ಅದನ್ನು ಸಮಾಜಕ್ಕೆ ಅರ್ಥೈಸುವ ಮತ್ತು ಪರಿಚಯಿಸುವ ಕಾರ್ಯ ಇನ್ನೂ ಆಗಿಲ್ಲ. ಈ ಬಗ್ಗೆ ವ್ಯಾಪಕ ಚರ್ಚೆ, ಸಂವಾದ ವ್ಯಾಪಕವಾಗಿ ನಡೆಯುವ ಆವಶ್ಯಕತೆ ಇದೆ ಎಂದು ಕಥೆಗಾರ ಎಸ್.ದಿವಾಕರ್ ಅಭಿಪ್ರಾಯಪಟ್ಟಿದ್ದಾರೆ.

ಮಂಗಳೂರಿನ ಡಿವಿಜಿ ಬಳಗ ಪ್ರತಿಷ್ಠಾನ ವತಿಯಿಂದ ನಗರದ ಕೊಡಿಯಾಲ್‌ಬೈಲ್‌ನ ಕರ್ಣಾಟಕ ಬ್ಯಾಂಕ್ ಸಭಾಂಗಣದಲ್ಲಿ ರವಿವಾರ ಜರುಗಿದ ಡಿವಿಜಿಯವರ ‘ಸಂಸ್ಕೃತಿ’ ಪುಸ್ತಕದ ಇಂಗ್ಲಿಷ್ ಅನುವಾದ ಕೃತಿಯನ್ನು ಅವರು ಬಿಡುಗಡೆಗೊಳಿಸಿದರು.

ಡಿವಿಜಿ ವಿಚಾರಧಾರೆಗಳು ಇಂದಿಗೂ ಪ್ರಸ್ತುತ. ಆದರೆ ಯಾವ ವಿಚಾರ ಸಂಕಿರಣಗಳಲ್ಲೂ ಅವರ ಪ್ರಸ್ತಾಪವೇ ಆಗುವುದಿಲ್ಲ. ಪ್ರಸ್ತುತ ಕನ್ನಡ ಸಾಹಿತ್ಯ ವಿಚಾರ ಸಂಕಿರಣಗಳಲ್ಲಿ ಕಾರಂತ, ಅಡಿಗ, ಅನಂತಮೂರ್ತಿ ಅವರಂತಹ ಪ್ರಮುಖ ಸಾಹಿತಿಗಳ ಹೆಸರುಗಳನ್ನು ಉಲ್ಲೇಖಿಸುತ್ತಾರೆಯೇ ವಿನಃ ಡಿವಿಜಿ ಬಗ್ಗೆ ಯಾರೂ ಚರ್ಚೆ ಮಾಡುವುದಿಲ್ಲ ಎಂದು ಎಸ್. ದಿವಾಕರ್ ಅಸಮಾಧಾನ ವ್ಯಕ್ತಪಡಿಸಿದರು.

ರಾಜಕೀಯ, ಧರ್ಮ, ಸಾಹಿತ್ಯ, ವಿಜ್ಞಾನ, ಸಮಾಜ ಇವೆಲ್ಲ ಪ್ರತ್ಯೇಕ ಎಂದಿದ್ದ ಡಿವಿಜಿ, ಈ ಎಲ್ಲ ಕ್ಷೇತ್ರಗಳು ಚೆನ್ನಾಗಿದ್ದರೆ ಮಾತ್ರ ಸಮಾಜ ಚೆನ್ನಾಗಿರುತ್ತದೆ ಎಂದು ಪ್ರತಿಪಾದಿಸಿದ್ದರು. ಪ್ರಸಕ್ತ ಕಾಲಘಟ್ಟದ ಜೀವನದ ವಿವಿಧ ಮಗ್ಗುಲುಗಳ ಬಗ್ಗೆ ಡಿವಿಜಿ ಅಂದೇ ಬರೆದಿದ್ದರು. ಸಂಸ್ಕೃತ, ಕನ್ನಡ ಮಾತ್ರವಲ್ಲ ಇಂಗ್ಲಿಷ್‌ನಲ್ಲೂ ಪಾಂಡಿತ್ಯ ಗಳಿಸಿದ್ದ ಡಿವಿಜಿ ಕನ್ನಡ ಸಾಹಿತ್ಯ ಬೆಳವಣಿಗೆಗೆ ತನ್ನದೇ ಆದ ಕೊಡುಗೆ ನೀಡಿದ್ದರು. 1910ರಿಂದಲೇ ಬರವಣಿಗೆ ಶುರು ಮಾಡಿದ್ದ ಅವರು ಪತ್ರಿಕೋದ್ಯಮ, ಸಾಹಿತ್ಯ ರಚನೆ ಹಾಗೂ ಸಾಹಿತ್ಯ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು ಎಂದು ದಿವಾಕರ್ ಹೇಳಿದರು.

ಯೋಗ್ಯತೆ ನೋಡದೆ ಸ್ಥಾನಮಾನಕ್ಕೆ ಹಾತೊರೆಯುವ ಇಂದಿನ ಕಾಲದಲ್ಲಿ ಸಂಸ್ಕೃತಿ, ಸ್ಥಾನಮಾನದ ಬಗ್ಗೆ ಡಿವಿಜಿ ವಿಸ್ತಾರವಾಗಿ ಬರೆದಿದ್ದಾರೆ. ಇಂಗ್ಲಿಷ್ ಭಾಷೆಗೆ ಅನುವಾದ ಮಾಡುವ ಮೂಲಕ ಡಿವಿಜಿ ಮರು ಹುಟ್ಟು ಪಡೆದಿದ್ದಾರೆ. ಸಂಸ್ಕೃತಿ, ಸಂಸ್ಕಾರ ಸಮಾಜದಲ್ಲಿ ಬಹುಮುಖ್ಯವಾಗಿದೆ ಎಂದು ಅನುವಾದಕ ಎ.ನರಸಿಂಹ ಭಟ್ ಹೇಳಿದರು.

ಪ್ರತಿಷ್ಠಾನ ಸಂಚಾಲಕ ಡಾ.ವಿರೂಪಾಕ್ಷ ದೇವರಮನೆ ಉಪಸ್ಥಿತರಿದ್ದರು. ಅಧ್ಯಕ್ಷ ಕನಕರಾಜು ಸ್ವಾಗತಿಸಿದರು. ಉಷಾ ಮಂದಾರ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News