ಅಳಿಯೂರಿನಲ್ಲಿ ಬೆದರಿಕೆಯನ್ನು ಖಂಡಿಸಿ ಪ್ರತಿಭಟನೆ
ಮೂಡುಬಿದಿರೆ, ಅ.7: ಇಲ್ಲಿನ ಶಿರ್ತಾಡಿ ಸಮೀಪದ ಅಳಿಯೂರಿನಲ್ಲಿ ನಾಟಕ ಬರಹಗಾರ, ಕಲಾವಿದ ಗಣೇಶ್ ಬಿ ಅಳಿಯೂರು ಅವರ ತೇಜೋವಧೆ ಹಾಗು ಅಪರಿಚಿತ ವ್ಯಕ್ತಿಗಳ ಬೆದರಿಕೆಯನ್ನು ಖಂಡಿಸಿ ರವಿವಾರ ಪ್ರತಿಭಟನಾ ಮೆರವಣಿಗೆ ನಡೆಯಿತು.
ಗರಡಿ ಬಾಕ್ಯಾರಿನಿಂದ ಅಳಿಯೂರು ಪೇಟೆ ತನಕ ಅಳಿಯೂರಿನ ಕೋಟಿ-ಚೆನ್ನಯ ಯುವ ಶಕ್ತಿ ಹಾಗೂ ಮಹಿಳಾ ಘಟಕ ಮತ್ತು ದೇಯಿ ಬೈದದಿ ಕಲಾ ತಂಡದ ನೇತೃತ್ವದಲ್ಲಿ ಸ್ಥಳೀಯರು ಕಾಲ್ನಡಿಗೆ ಮೆರವಣೆಗೆ ನಡೆಸಿ ದುಷ್ಟ ಸಂಚು ನಡೆಸುವವರ ವಿರುದ್ದ ಘೋಷಣೆ ಕೂಗಿದರು.
ಶಿರ್ತಾಡಿ ಬಿಲ್ಲವ ಸಂಘದ ಮಾಜೀ ಅಧ್ಯಕ್ಷ ರುಕ್ಕಯ್ಯ ಪೂಜಾರಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ ಗಣೇಶ್ ಬರೆದ ಮೂರ್ತೆ ಮುದರೆ ನಾಟಕದಲ್ಲಿ ದೈವ ನಿಂದನೆಯ ಅಂಶಗಳು ಕಂಡು ಬರದಿದ್ದರೂ ಅವರ ತೇಜೋವಧೆ ನಡೆಸಲು ಪ್ರಯತ್ನಿಸುವುದು ಬೆದರಿಕೆ ಒಡ್ಡುವುದನ್ನು ಖಂಡಿಸುವುದಾಗಿ ಹೇಳಿದರು.
ಶಿರ್ತಾಡಿ ಪಂ ಸದಸ್ಯ ಸುಕೇಶ್ ಶೆಟ್ಟಿ, ಕೋಟಿ ಚೆನ್ನಯ ಯುವ ಶಕ್ತಿಯ ಮಾಜೀ ಅಧ್ಯಕ್ಷ ವಿಶ್ವನಾಥ ಕೋಟ್ಯಾನ್ ಮಾತನಾಡಿ, ತೇಜೋವಧೆಯನ್ನು ಖಂಡಿಸಿದರು. ಶಿರ್ತಾಡಿ ಬಿಲ್ಲವ ಸಂಘದ ಅಧ್ಯಕ್ಷ ಲಕ್ಷಣ ಕೋಟ್ಯಾನ್, ನೆಲ್ಲಿಕಾರು ಪಂ ಅಧ್ಯಕ್ಷ ಜಯಂತ್ ಹೆಗ್ಡೆ, ದರೆಗುಡ್ಡೆ ಪಂ ಅಧ್ಯಕ್ಷ ಮುನಿರಾಜ್ ಹೆಗ್ಡೆ, ಕೋಟಿ ಚೆನ್ನಯ ಯುವ ಶಕ್ತಿಯ ಗೌರವ ಅಧ್ಯಕ್ಷ ನವೀನ್ ಚಂದ್ರ ಸಾಲ್ಯಾನ್, ಅಧ್ಯಕ್ಷ ರಮಾನಂದ ಕೋಟ್ಯಾನ್, ಕಾರ್ಯದರ್ಶಿ ಸಂತೋಷ್, ಬೋರುಗುಡ್ಡೆ ಬಿಲ್ಲವ ಸೇವಾದಳದ ಅಧ್ಯಕ್ಷ ನಾರಾಯಣ ಪೂಜಾರಿ, ಕಾರ್ಯದರ್ಶಿ ದಿನೇಶ್, ಯು.ಎಸ್.ಕೆ ಪ್ರೆಂಡ್ಸ್‍ನ ಅಧ್ಯಕ್ಷ ಅಶೋಕ್ ಸುವರ್ಣ, ವಿಠಲ ಗೆಳೆಯರ ಬಳಗದ ಅಧ್ಯಕ್ಷ ಸುಧಾಕರ ಪೂಜಾರಿ, ಕರಾವಳಿ ಕೇಸರಿ ಪ್ರೆಂಡ್ಸ್ ಕ್ಲಬ್‍ನ ಸಂಚಾಲಕ ಸಮೀತ್ ರಾಜ್ ದರೆಗುಡ್ಡೆ, ಗ್ರಾ.ಪಂ ಸದ್ಯರಾದ ಉದಯ ಪೂಜಾರಿ, ಸಂತೋಷ್, ಲಕ್ಷಣ ಸುವಣ್ ಅಳಿಯೂರು, ಶಿರ್ತಾಡಿ ಪಂ ಮಾಜಿ ಅಧ್ಯಕ್ಷ ಪದ್ಮನಾಭ್ ಕೋಟ್ಯಾನ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.