ಉಡುಪಿ: ಮಾದಕ ವ್ಯವಸ ವಿರೋಧಿ ಮಾಸಾಚರಣೆ ಸಮಾರೋಪ
ಉಡುಪಿ, ಅ.7: ಸಾಮಾಜಿಕ ಕಳಕಳಿಯೊಂದಿಗೆ ವ್ಯಸನ ಮುಕ್ತ ಸಮಾಜದ ನಿರ್ಮಾಣಕ್ಕಾಗಿ ನಿರಂತರ ಎರಡು ತಿಂಗಳ ಕಾಲ ಹಮ್ಮಿಕೊಂಡ ವಿವಿಧ ಕಾರ್ಯಕ್ರಮಗಳು ಶೇ.60ರಷ್ಟು ಜಿಲ್ಲೆಯಲ್ಲಿ ಪರಿಣಾಮ ಬೀರಿ, ಯಶಸ್ಸು ಗೊಂಡಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರಗಿ ಹೇಳಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಉಡುಪಿ ಪ್ರೆಸ್‌ಕ್ಲಬ್ ಜಂಟಿ ಸಹಯೋಗದೊಂದಿಗೆ ಶನಿವಾರ ಬಡಗುಬೆಟ್ಟು ಸೊಸೈಟಿಯ ಜಗನ್ನಾಥ ಸಭಾಂಗಣದಲ್ಲಿ ಆಯೋಜಿಸ ಲಾದ ಮಾದಕ ವ್ಯವಸ ವಿರೋಧಿ ಮಾಸಾಚರಣೆಯ ಸಮಾರೋಪ ಸಮಾರಂಭ ದಲ್ಲಿ ಅವರು ಮಾತನಾಡುತಿದ್ದರು.
ಮಾದಕ ವ್ಯಸನ ಕುರಿತ ಜಾಗೃತಿ ಮೊಬೈಲ್ ಕಿರು ಚಿತ್ರ ಸ್ಪರ್ಧೆಯ ವಿಜೇತರಿಗೆ ಈ ಸಂದರ್ಭದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು. ಸ್ಪರ್ಧೆಯಲ್ಲಿ ಒಟ್ಟು 32 ಕಾಲೇಜುಗಳು ಭಾಗವಹಿಸಿದ್ದವು. ಪದವಿ ಕಾಲೇಜುಗಳ ವಿಭಾಗದಲ್ಲಿ ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಪ್ರಥಮ, ಕೆ.ಆರ್.ಹೆಗ್ಡೆ ಕಾಲೇಜ್ ಆಫ್ ಪ್ಯಾರಾಮೆಡಿಕಲ್ ಸೈಯನ್ಸ್ ಕೋಟ ದ್ವಿತೀಯ, ಮಿಲಾಗ್ರಿಸ್ ಕಾಲೆಜು ಕಲ್ಯಾಣಪುರ ತೃತೀಯ ಹಾಗೂ ವೈಕುಂಠ ಬಾಳಿಗಾ ಕಾನೂನು ಕಾಲೆಜು ಉಡುಪಿ ಮತ್ತು ಎನ್‌ಎಂಎ ಕಾಲೇಜು ನಿಟ್ಟೆ ಸಮಾಧಾನಕರ ಬಹುಮಾನವನ್ನು ಪಡೆದುಕೊಂಡಿದೆ.
ಪಿಯುಸಿ ವಿಭಾಗದಲ್ಲಿ ಬಾರ್ಕೂರು ನ್ಯಾಷನಲ್ ಕಾಲೇಜು ಪ್ರಥಮ, ಹೆಬ್ರಿ, ಅಮೃತ ಭಾರತಿ ಪಿಯು ಕಾಲೇಜು ದ್ವಿತೀಯ, ಅದಮಾರು ಪೂರ್ಣಪ್ರಜ್ಞಾ ಪಿಯು ಕಾಲೇಜು ತೃತೀಯ, ಶಿರೂರು ಗ್ರೀನ್ ವ್ಯಾಲಿ ಪಿಯು ಕಾಲೇಜು ಮತ್ತು ಕಾರ್ಕಳ ಸರಕಾರಿ ಜ್ಯೂನಿಯರ್ ಕಾಲೇಜು ಸಮಾಧಾನಕರ ಬಹು ಮಾನವನ್ನು ಪಡೆದುಕೊಂಡಿದೆ.
ಕುಂದಾಪುರ ಸಹಾಯಕ ಅರಣ್ಯಾಧಿಕಾರಿ ಪ್ರಭಾಕರನ್, ಬಡಗುಬೆಟ್ಟು ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಭಾಸ್ಕರ್ ಹಂದೆ, ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಸರಳೇಬೆಟ್ಟು, ಪ್ರೆಸ್ ಕ್ಲಬ್ ಸಂಚಾಲಕ ನಾಗರಾಜ್ ರಾವ್ ಉಪಸ್ಥಿತರಿದ್ದರು. ಪತ್ರಕರ್ತ ಅಶೋಕ್ ಪೂಜಾರಿ ಸ್ವಾಗತಿಸಿದರು. ಪತ್ರಕರ್ತರ ಸಂಘದ ಕೋಶಾಧಿಕಾರಿ ದಿವಾಕರ್ ಹಿರಿಯಡಕ ಕಾರ್ಯಕ್ರಮ ನಿರೂಪಿಸಿದರು.