ಅರೆಬಿಯನ್ ಸಮುದ್ರದ ಮೇಲೆ ಚಂಡ ಮಾರುತ ಸೃಷ್ಟಿ: ದಕ್ಷಿಣ ರಾಜ್ಯಗಳಲ್ಲಿ ಭಾರೀ ಮಳೆ ಸಾಧ್ಯತೆ

Update: 2018-10-08 14:44 GMT

ಹೊಸದಿಲ್ಲಿ, ಅ. 8: ಅರೇಬಿಯನ್ ಸಮುದ್ರದ ಮೇಲಿನ ಅಧಿಕ ಒತ್ತಡ ಗಂಭೀರ ಚಂಡಮಾರುತವಾಗಿ ಬದಲಾಗುವ ಸಾಧ್ಯತೆ ಇದ್ದು, ಇದರಿಂದ ತಮಿಳುನಾಡು, ಕೇರಳ, ಪುದುಚೇರಿ ಹಾಗೂ ಲಕ್ಷದ್ವೀಪಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಭಾರೀ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ತೀವ್ರ ಚಂಡಮಾರುತವಾಗಿ ಬದಲಾದ ಬಳಿಕ ಅದು ಓಮನ್ ಹಾಗೂ ಯೆಮನ್ ಕರಾವಳಿ ದಾಟಲಿದೆ ಎಂದು ಐಎಂಡಿ ಹೇಳಿದೆ. ಚಂಡಮಾರುತದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ. ಕೇರಳ, ಲಕ್ಷದ್ವೀಪ, ಮಿನಿಕೋಯ್ ದ್ವೀಪ ಹಾಗೂ ದಕ್ಷಿಣ ತಮಿಳುನಾಡು ಸಮುದ್ರ ತಟದಲ್ಲಿ ವಿಮಾನ ಹಾಗೂ ಹಡಗುಗಳನ್ನು ನಿಯೋಜಿಸಲಾಗಿದೆ ಎಂದು ತಟ ರಕ್ಷಣಾ ಪಡೆ ತಿಳಿಸಿದೆ. ‘‘ಚಂಡ ಮಾರುತ ಸಂಬಂಧಿ ಯಾವುದೇ ಅನಾಹುತ ನಿಭಾಯಿಸಲು ಹಾಗೂ ಸಿದ್ಧತೆ ಅಂದಾಜಿಸಲು ಜಿಲ್ಲೆ ಹಾಗೂ ಕೇಂದ್ರಾಡಳಿತ ಪ್ರದೇಶದೊಂದಿಗೆ ಕೊಚ್ಚಿ ಹಾಗೂ ಲಕ್ಷದ್ವೀಪಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗಿದೆ. ನಿರ್ದಿಷ್ಟ ಪ್ರಾಕೃತಿಕ ವಿಪತ್ತು ಹಾಗೂ ಸಿದ್ಧತಾ ಸಭೆಗಳನ್ನು ಲಕ್ಷದ್ವೀಪ ಹಾಗೂ ಮಿನಿಕೋಯ್ ದ್ವೀಪದಲ್ಲಿ ನಡೆಸಲಾಗಿದೆ’’ ಎಂದು ತಟ ರಕ್ಷಣಾ ಪಡೆ ತಿಳಿಸಿದೆ.

ಈ ಸಂದರ್ಭ ಸಮುದ್ರ ಪಕ್ಷುಬ್ದಗೊಳ್ಳುವುದರಿಂದ ದಡಕ್ಕೆ ಹಿಂದಿರುಗು ವಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ. ಮುಂದಿನ 12 ಗಂಟೆಗಳ ಕಾಲ ಲಕ್ಷದ್ವೀಪ ಪ್ರದೇಶದ ಆಳ ಸಮುದ್ರದಲ್ಲಿ ಮೀನುಗಾರಿಗೆ ನಡೆಸದಿರುವಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ ಎಂದು ಐಎಂಡಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News