ಪೊಲೀಸರ ಆರೋಗ್ಯ ಸುಧಾರಣೆಗೆ ಹೆಚ್ಚಿನ ಗಮನ ಅಗತ್ಯ: ಜಿ.ಶಂಕರ್
ಉಡುಪಿ, ಅ.8: ಸಮಾಜದ ಸ್ವಾಸ್ಥ ಕಾಪಾಡುವಲ್ಲಿ ಹಗಲಿರುಳು ಒತ್ತಡ ದಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರು ತಮ್ಮ ಆರೋಗ್ಯ ಸುಧಾರಣೆಗೆ ಹೆಚ್ಚಿನ ಗಮನ ಹರಿಸಬೇಕು. ಪೊಲೀಸರ ಆರೋಗ್ಯ ಉತ್ತಮವಾಗಿದ್ದರೆ ಅವರ ಕುಟುಂಬದ ಆರೋಗ್ಯದೊಂದಿಗೆ ಸಮಾಜದ ಆರೋಗ್ಯವೂ ಉತ್ತಮವಾಗಿರಲು ಸಾಧ್ಯ ಎಂದು ಉಡುಪಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಅಧ್ಯಕ್ಷ ಡಾ.ಜಿ. ಶಂಕರ್ ಹೇಳಿದ್ದಾರೆ.
ಉಡುಪಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್, ಜಿಲ್ಲಾ ಮೊಗವೀರ ಯುವ ಸಂಘಟನೆ, ಮಣಿಪಾಲ ಮಾಹೆಯ ಸಹಭಾಗಿತ್ವದಲ್ಲಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸೋಮವಾರ ನಡೆದ ಜಿಲ್ಲಾ ಪೊಲೀಸ್, ನಿವೃತ್ತ ಪೊಲೀಸ್ ಸಿಬ್ಬಂದಿಗಳಿಗೆ ಆರೋಗ್ಯ ಸುರಕ್ಷಾ ಕಾರ್ಡ್ ವಿತರಣೆ ಮತ್ತು ಜಿಲ್ಲಾ ಪೊಲೀಸ್ ಸಿಬ್ಬಂದಿಗಳ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಅಧ್ಯಕ್ಷತೆ ವಹಿಸಿದ್ದ ಎಸ್‌ಪಿ ಲಕ್ಷ್ಮಣ ಬ.ನಿಂಬರ್ಗಿ ಮಾತನಾಡಿ, ಪೊಲೀಸರಿಗೆ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಇರುವುದರಿಂದ ಸಾಕಷ್ಟು ಒತ್ತಡ ದಿಂದ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪೊಲೀಸರು ತಮ್ಮ ಕರ್ತವ್ಯದೊಂದಿಗೆ ದೈಹಿಕ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ತಿಳಿಸಿದರು.
ಮಣಿಪಾಲ ಮಾಹೆ ರಿಜಿಸ್ಟ್ರಾರ್ ನಾರಾಯಣ ಸಭಾಹಿತ್,ಜಿಲ್ಲಾ ಮೊಗವೀರ ಯುವ ಸಂಘಟನೆ ಅಧ್ಯಕ್ಷ ವಿನಯ ಕರ್ಕೇರ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಉಪಸ್ಥಿತರಿದ್ದರು. ಮೊಗವೀರ ಯುವ ಸಂಘಟನೆಯ ಜಯ ಸಿ.ಕೋಟ್ಯಾನ್ ಸ್ವಾಗತಿಸಿದರು. ಉಡುಪಿ ಡಿವೈಎಸ್‌ಪಿ ಟಿ.ಆರ್. ಜೈಶಂಕರ್ ವಂದಿಸಿದರು. ಶಿವಾನಂದ ಬಿ. ಕಾರ್ಯಕ್ರಮ ನಿರೂಪಿಸಿದರು.
ಒಂದು ಸಾವಿರಕ್ಕೂ ಅಧಿಕ ಜಿಲ್ಲಾ ಪೊಲೀಸ್ ಸಿಬ್ಬಂದಿಗಳು, ನಿವೃತ್ತ ಪೊಲೀಸ್ ಸಿಬ್ಬಂದಿಗಳಿಗೆ ಆರೋಗ್ಯ ಸುರಕ್ಷಾ ಕಾರ್ಡ್‌ಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು. 200ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳು ಮಣಿಪಾಲ ಆಸ್ಪತ್ರೆಯಲ್ಲಿ ರಕ್ತದಾನ ಮಾಡಿದರು.