ಪ್ರೌಢಶಾಲಾ ಸಹ ಶಿಕ್ಷಕರ ಬೇಡಿಕೆಗಳ ಈಡೇರಿಕೆಗೆ ಆಗ್ರಹ: ನ.2ರಂದು ಬೆಂಗಳೂರಿನಲ್ಲಿ ಧರಣಿಯ ಎಚ್ಚರಿಕೆ

Update: 2018-10-08 17:32 GMT

ಉಡುಪಿ, ಅ.8: ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಹಲವಾರು ಬೇಡಿಕೆಗಳು ಕಳೆದ ಕಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ಇವುಗಳನ್ನು ಶೀಘ್ರವೇ ಈಡೇರಿಸದಿದ್ದರೆ, ಮುಂದಿನ ನ.2ರಂದು ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ಒಂದು ದಿನದ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಲು ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘ ನಿರ್ಧರಿಸಿದೆ ಎಂದು ಸಂಘದ ಉಡುಪಿ ಜಿಲ್ಲಾ ಘಟಕ ಪ್ರಕಟಣೆಯಲ್ಲಿ ತಿಳಿಸಿದೆ.

ಸಂಘವು ಪ್ರೌಢಾವಸ್ಥೆಯಲ್ಲಿರುವ ವಿದ್ಯಾರ್ಥಿಗಳ ಮಾನಸಿಕ ಹಾಗೂ ಬೌದ್ಧಿಕ ಅಭಿವೃದ್ಧಿಗೆ ಶ್ರಮಿಸುತ್ತಾ ಬಂದಿದ್ದು, ಆದರೆ ಪ್ರೌಢ ಶಾಲಾ ಸಹ ಶಿಕ್ಷಕ ವರ್ಗದ ಅನೇಕ ಸಮಸ್ಯೆಗಳು ಹಲವು ವರ್ಷಗಳಿಂದ ಪರಿಹಾರ ಕಾಣದೇ ಉಳಿದುಕೊಂಡಿದೆ ಎಂದು ಜಿಲ್ಲಾ ಘಟಕ ಪ್ರಕಟಣೆಯಲ್ಲಿ ತಿಳಿಸಿದೆ.

ಬೇಡಿಕೆಗಳು: ಪ್ರೌಢ ಶಾಲಾ ಶಿಕ್ಷಕರ ವೇತನ ತಾರತಮ್ಯದ ಹಿನ್ನೆಲೆಯಲ್ಲಿ ರಚಿಸಲಾಗಿದ್ದ ಕುಮಾರನಾಯಕ್ ವರದಿಯನ್ನು ಸಮರ್ಪಕವಾಗಿ ಜಾರಿ ಗೊಳಿಸಬೇಕು. ಹಿಂಬಾಗಿಲಿನ ಮೂಲಕ ವಾರ್ಷಿಕ ವಿಶೇಷ ಬಡ್ತಿಯ ಸವಲತ್ತನ್ನು ಕಡಿತಗೊಳಿಸುವ ಕ್ರಮವನ್ನು ಕೂಡಲೇ ಕೈಬಿಟ್ಟು ಮೂಲವೇತನ ದೊಂದಿಗೆ ಅದನ್ನು ಮುಂದುವರಿಸಬೇಕು.

ಸರಕಾರಿ ಮತ್ತು ಅನುದಾನಿತ ಪ್ರೌಢ ಶಾಲಾ ತರಗತಿಗಳಲ್ಲಿ ವಿದ್ಯಾರ್ಥಿ ಮತ್ತು ಶಿಕ್ಷಕರ ಅನುಪಾತವನ್ನು ಈಗಿನ 70:1ರ ಬದಲು 50:1ಕ್ಕೆ ನಿಗದಿಪಡಿಸುವ ಮೂಲಕ ಸರಕಾರಿ ಹಾಗೂ ಅನುದಾನಿತ ಪ್ರೌಢ ಶಾಲಾ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಅವಕಾಶ ಕಲ್ಪಿಸಿಕೊಡಬೇಕು.

ಪ್ರಾಥಮಿಕ ಶಾಲೆಯಿಂದ ಪ್ರೌಢ ಶಾಲೆಗೆ, ಪ್ರೌಢ ಶಾಲೆಯಿಂದ ಪದವಿ ಪೂರ್ವ ಕಾಲೇಜುಗಳಿಗೆ ಹಾಗೂ ಮುಖ್ಯೋಪಾಧ್ಯಾಯ ಹುದ್ದೆಗಳಿಗೆ ಮುಂಬಡ್ತಿ ಹೊಂದಿದ ಶಿಕ್ಷಕರು ಹಾಗೂ ಉಪನ್ಯಾಸಕರುಗಳಿಗೆ ಹಿಂದಿನ ವೃಂದ ದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಸ್ವಯಂಚಾಲಿತ, ಕಾಲಮಿತಿ ಭಡ್ತಿಗಳನ್ನು ಮಂಜೂರು ಮಾಡಬೇಕು.

ಅನುದಾನಿತ ಶಾಲಾ ಶಿಕ್ಷಕರಿಗೆ ಕಾಲ್ಪನಿಕ ವೇತನಕ್ಕೆ ಸಂಬಂಧಿಸಿದಂತೆ ಬಸವರಾಜ ಹೊರಟ್ಟಿ ಅಧ್ಯಕ್ಷತೆಯಲ್ಲಿ ರಚನೆಗೊಂಡ ಸಮಿತಿ ನೀಡಿರುವ ವರದಿ ಯನ್ನು ಯಥಾವತ್ತಾಗಿ ಕೂಡಲೇ ಜಾರಿಗೊಳಿಸಬೇಕು. ಶಿಕ್ಷಕರ ವರ್ಗಾವಣೆ ಯನ್ನು ಕೂಡಲೇ ಆರಂಭಿಸಬೇಕು ಹಾಗೂ ವರ್ಗಾವಣೆ ಪ್ರಕ್ರಿಯೆಯಲ್ಲಿರುವ ನ್ಯೂನ್ಯತೆಗಳನ್ನು ಸರಿಪಡಿಸಬೇಕು. ಪ್ರೌಢ ಶಾಲಾ ಶಿಕ್ಷಕರಿಂದ ಮುಖ್ಯೋಪಾಧ್ಯಾಯರ ಹುದ್ದೆಗಳಿಗೆ ಬೆಂಗಳೂರು, ಗುಲ್ಬರ್ಗ, ಧಾರವಾಡ ಆಯುಕ್ತಾಲಯಗಳಲ್ಲಿ ಕೂಡಲೇ ಮುಂಬಡ್ತಿ ನೀಡಬೇಕು.

ರಜಾ ಅವಧಿಯಲ್ಲಿ ತರಗತಿಗಳು, ಗಣತಿ ಕಾರ್ಯಗಳು, ಬೋಧಕೇತರ ಕರ್ತವ್ಯಗಳಿಗೆ ಶಿಕ್ಷಕರನ್ನು ನಿಯೋಜಿಸುವುದನ್ನು ನಿಲ್ಲಿಸಬೇಕು. ಅಲ್ಲವೇ ಪ್ರೌಢ ಶಾಲಾ ಸಹ ಶಿಕ್ಷಕರನ್ನು ರಜಾರಹಿತ ನೌಕರರೆಂದು ಪರಿಗಣಿಸಿ ಎಲ್ಲಾ ಸೌಲಭ್ಯ ನೀಡಬೇಕು. ಪ್ರೌಢ ಶಾಲಾ ಸಹಶಿಕ್ಷಕರ ವೇತನ ತಾರಮತ್ಯ ಸರಿಪಡಿಸಬೇಕು. ಶಿಕ್ಷಕರಿಗೆ ನೀಡುತ್ತಿರುವ ಬೋಧಕೇತರ ಕಾರ್ಯಗಳನ್ನು ರದ್ದುಪಡಿಸಿ ಹೊರಗುತ್ತಿಗೆ ಆಧಾರದ ಮೇಲೆ ಬೋಧಕೇತರ ಕಾರ್ಯನಿರ್ವಹಿಸಲು ಸಿಬ್ಬಂದಿಗಳನ್ನು ನೇಮಿಸಿಕೊಳ್ಳಬೇಕು. 2006ರ ನಂತರ ನೇಮಕಾತಿ ಹೊಂದಿರುವ ಶಿಕ್ಷಕರ, ನೌಕರರ ಎನ್‌ಪಿಎಸ್ ಪದ್ಧತಿಯನ್ನು ರದ್ದುಪಡಿಸಿ ಹಿಂದಿನ ಮಾದರಿಯ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News