ದೂರು ಸ್ವೀಕಾರ ಅಧಿಕಾರಿ ನಿಯೋಜಿಸದ ವ್ಯಾಟ್ಸ್‌ಆ್ಯಪ್ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರಕ್ಕೆ ಸುಪ್ರೀಂ ನಿರ್ದೇಶ

Update: 2018-10-08 18:04 GMT

ಹೊಸದಿಲ್ಲಿ, ಅ. 8: ದೂರು ಸ್ವೀಕರಿಸುವ ಅಧಿಕಾರಿಯ ನಿಯೋಜನೆಗೆ ಅವಕಾಶ ಸಹಿತ ಭಾರತೀಯ ಕಾನೂನನ್ನು ವ್ಯಾಟ್ಸ್ ಆ್ಯಪ್ ಅನುಸರಿಸುತ್ತಿಲ್ಲ ಎಂದು ಆರೋಪಿಸಿ ಸಲ್ಲಿಸಲಾದ ಮನವಿಗೆ ಪ್ರತಿಕ್ರಿಯೆ ದಾಖಲಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರಕಾರಕ್ಕೆ ನಿರ್ದೇಶಿಸಿದೆ.

ಈ ಮನವಿಯಲ್ಲಿ ಹಲವು ವಿಷಯಗಳ ಬಗ್ಗೆ ಪ್ರಶ್ನೆ ಎತ್ತಲಾಗಿದೆ. ಆದುದರಿಂದ ಪ್ರತಿಕ್ರಿಯೆ ದಾಖಲಿಸಲು ಸಮಯದ ಅಗತ್ಯತೆ ಇದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಮಣಿಂದರ್ ಸಿಂಗ್ ಹೇಳಿದ ಬಳಿಕ ನ್ಯಾಯಮೂರ್ತಿ ಆರ್.ಎಫ್. ನಾರಿಮನ್ ಹಾಗೂ ನವೀನ್ ಸಿನ್ಹಾ ಅವರನ್ನು ಒಳಗೊಂಡ ಪೀಠ ಪ್ರತಿಕ್ರಿಯೆ ದಾಖಲಿಸಲು ಕೇಂದ್ರ ಸರಕಾರಕ್ಕೆ ಸಮಯಾವಕಾಶ ನೀಡಿತು.

 ಸರಕಾರೇತರ ಸಂಸ್ಥೆ ಸಿಎಎಸ್‌ಸಿ (ಸೆಂಟರ್ ಪಾರ್ ಅಕೌಂಟೆಬಿಲಿಟಿ ಆ್ಯಂಡ್ ಸಿಸ್ಟಮೆಟಿಕ್ ಚೇಂಜ್) ಸಲ್ಲಿಸಿದ ಮನವಿಯ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರ ಹಾಗೂ ವ್ಯಾಟ್ಸ್‌ಆ್ಯಪ್‌ಗೆ ನೋಟಿಸು ಜಾರಿ ಮಾಡಿತ್ತು. ಅಲ್ಲದೆ ಭಾರತೀಯ ರಿಸರ್ವ್ ಬ್ಯಾಂಕ್‌ನ ನಿಯಮವನ್ನು ಸಂಪೂರ್ಣವಾಗಿ ಅನುಸರಣೆ ಮಾಡದೇ ಇದ್ದರೆ, ಪಾವತಿ ಸೇವೆ ನಿಲ್ಲಿಸುವಂತೆ ಸೂಚಿಸಿತ್ತು.

ಭಾರತದಲ್ಲಿ ವ್ಯಾಟ್ಸ್‌ಆ್ಯಪ್‌ಗೆ 200 ದಶಲಕ್ಷ ಬಳಕೆದಾರರಿದ್ದಾರೆ. 1 ದಶಲಕ್ಷ ಜನರು ಪಾವತಿ ಸೇವೆಯನ್ನು ಪ್ರಾಯೋಗಿಕವಾಗಿ ಬಳಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News