‘ನಮ್ಮೂರಿನ ಬೈಲಗುತ್ತು’ ನಾಟಕ ಕೃತಿ ಬಿಡುಗಡೆ

Update: 2018-10-09 14:44 GMT

ಮಂಗಳೂರು, ಅ.9: ಲೇಖಕಿ ಪುಷ್ಪಾ ಜೋಗಿ ಅವರ ‘ನಮ್ಮೂರಿನ ಬೈಲಗುತ್ತು’ ನಾಟಕ ಕೃತಿ ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಬಿಡುಗಡೆಗೊಂಡಿತು.

ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಅತ್ತಾವರ ಶಿವಾನಂದ ಕರ್ಕೇರಾ, ಪುಷ್ಪಾ ಜೋಗಿ ಅವರು ಬರೆದ ನಾಟಕಗಳಲ್ಲಿ ಅವರ ಜೀವನಾನುಭವದ ಸಾರವಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ಶಿಕ್ಷಕರಾಗಿದ್ದುಕೊಂಡು ಸಾಹಿತ್ಯ ಕೃಷಿ ನಡೆಸಿದ ಅನೇಕ ಮಂದಿ ಸಾಧಕರಿದ್ದಾರೆ. ಪುಷ್ಪಾ ಜೋಗಿ ಅವರೂ ಶಿಕ್ಷಕಿಯಾಗಿ ನಿವೃತ್ತಿ ಹೊಂದಿ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ. ‘ನಮ್ಮೂರಿನ ಬೈಲಗುತ್ತು’ ನಾಟಕ ಕೃತಿ ಕುತೂಹಲ ಹೊಂದಿದ್ದು, ಓದುಗರು ಮತ್ತು ಪ್ರೇಕ್ಷಕರಿಗೆ ಆಪ್ತವಾಗಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತ ಪಿ.ಬಿ. ಹರೀಶ್ ರೈ ಮಾತನಾಡಿ, ಮಹಿಳೆಯೊಬ್ಬರು ಸರಣಿ ಕೃತಿ ಬಿಡುಗಡೆ ನಡೆಸುತ್ತಿರುವುದು ಜಿಲ್ಲೆಯಲ್ಲಿ ಮೊದಲ ಪ್ರಯತ್ನ ಎಂದರು. 

ಲೇಖಕಿ ಪುಷ್ಪಾ ಜೋಗಿ ಮಾತನಾಡಿ, ನನಗೆ ಬಾಲ್ಯದಿಂದಲೇ ಪುಸ್ತಕ ಓದುವ, ನಾಟಕ ನೋಡುವ ಹವ್ಯಾಸವಿತ್ತು. ಬಳಿಕ ನಾಟಕ ರಚನೆ ನಡೆಸಿದ್ದೆ. ಶಾಲೆಯಲ್ಲಿ ಮಕ್ಕಳು ಈ ನಾಟಕಗಳನ್ನು ಅಭಿನಯಿಸಿ ಬಹುಮಾನ ಗೆದ್ದಾಗ ಸಂತಸಪಟ್ಟಿದ್ದೆ. ಇದೀಗ ಸಾಮಾಜಿಕ ನಾಟಕಗಳ ಸಂಕಲನ ಬಿಡುಗಡೆಗೊಂಡಿದೆ ಎಂದರು.

ಅಮೃತ ಪ್ರಕಾಶ ಪತ್ರಿಕೆ ವ್ಯವಸ್ಥಾಪಕ ಸಂಪಾದಕಿ ಮಾಲತಿ ಶೆಟ್ಟಿ ಮಾಣೂರು ಸ್ವಾಗತಿಸಿದರು. ಉಪಸಂಪಾದಕ ಕಾಸರಗೋಡು ಅಶೋಕ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಲೇಖಕಿ ಅರುಣಾ ನಾಗರಾಜ್ ವಂದಿಸಿದರು.

ಅಮೃತ ಪ್ರಕಾಶ ಪತ್ರಿಕೆ ಸಾರಥ್ಯದಲ್ಲಿ ನಡೆಯುವ ಸರಣಿ ಕಾರ್ಯಕ್ರಮದ ಅಂಗವಾಗಿ 6ನೇ ಕಾರ್ಯಕ್ರಮವಾಗಿ ಈ ಪುಸ್ತಕ ಬಿಡುಗಡೆಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News