ತಳಮಟ್ಟದಿಂದ ಪಕ್ಷದ ಬಲವರ್ಧನೆಗೆ ಕ್ರಮ: ಗಂಗಣ್ಣ

Update: 2018-10-09 15:54 GMT

ಉಡುಪಿ, ಅ.9: ಉಡುಪಿ ಜಿಲ್ಲಾ ಜೆಡಿಎಸ್‌ನಲ್ಲಿ ಹೇಳಿಕೊಳ್ಳುವಂಥ ಸಮಸ್ಯೆ ಗಳು ಯಾವುದೂ ಇಲ್ಲ. ಹೀಗಾಗಿ ಎಲ್ಲಾ ಕಾರ್ಯಕರ್ತರನ್ನು ಒಟ್ಟು ಸೇರಿಸಿ ತಳಮಟ್ಟದಿಂದ ಪಕ್ಷದ ಬಲವರ್ಧನೆಗೆ ಪ್ರಯತ್ನ ನಡೆಸಲಾಗುವುದು ಎಂದು ಜಾತ್ಯತೀತ ಜನತಾ ದಳ (ಜೆಡಿಎಸ್)ದ ರಾಜ್ಯ ಹಿರಿಯ ಉಪಾಧ್ಯಕ್ಷ ಎಂ. ಗಂಗಣ್ಣ ಹೇಳಿದ್ದಾರೆ.

ಪಕ್ಷ ಸಂಘಟನೆಗಾಗಿ ಕರಾವಳಿ ಜಿಲ್ಲೆಗಳ ಪ್ರವಾಸದಲ್ಲಿರುವ ಗಂಗಣ್ಣ ಅವರು ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತಿದ್ದರು. ಕಳೆದ ಒಂದು ವಾರದಿಂದ ತಾನು ಕರಾವಳಿಯ ಪ್ರವಾಸದಲ್ಲಿದ್ದೇನೆ. ಉತ್ತರ ಕನ್ನಡ ಪ್ರವಾಸದ ಬಳಿಕ ಕಳೆದೆರಡು ದಿನಗಳಿಂದ ಉಡುಪಿ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ತೆರಳಿ ಪಕ್ಷದ ಕಾರ್ಯಕರ್ತರನ್ನು ಭೇಟಿಯಾಗುತಿದ್ದೇನೆ ಎಂದರು.

ಪಕ್ಷ ಈಗ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದರಿಂದ ಪಕ್ಷದ ಬಲವರ್ಧನೆಗೆ ಉತ್ತಮ ಅವಕಾಶಗಳಿವೆ. ಕರಾವಳಿಯೂ ಸೇರಿದಂತೆ ವಿವಿದೆಡೆಗಳಲ್ಲಿ ನಾವು ಬಲಿಷ್ಠಗೊಳ್ಳುತಿದ್ದೇವೆ. ಹಣಕಾಸಿನ ಕೊರತೆ ಇದ್ದರೂ, ಉತ್ಸಾಹಿ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಸ್ವಶಕ್ತಿಯಿಂದ ಪಕ್ಷ ಸಂಘಟನೆ ನಡೆಸುತಿ ದ್ದಾರೆ ಎಂದವರು ಹೇಳಿದರು.

ರಾಜ್ಯದ ಸಮ್ಮಿಶ್ರ ಸರಕಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.ವಿಪಕ್ಷದ ಅಪಪ್ರಚಾರದ ನಡುವೆಯೂ ರಾಜ್ಯ ಅಭಿವೃದ್ಧಿ ಕುಂಠಿತಗೊಳ್ಳದಂತೆ ನೋಡಿ ಕೊಳ್ಳಲಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಸ್ಪಂದನೆ ಹಾಗೂ ಹೊಂದಾಣಿಕೆ ಚೆನ್ನಾಗಿದೆ ಎಂದರು.

ಉಡುಪಿ ಜಿಲ್ಲೆಯ ಹಲವು ಸಮಸ್ಯೆಗಳ ಕುರಿತು ಕಾರ್ಯಕರ್ತರು ನಮ್ಮ ಗಮನ ಸೆಳೆದಿದ್ದಾರೆ. ಅವುಗಳ ಕುರಿತು ಸಂಬಂಧಿತರೊಂದಿಗೆ ಮಾತನಾಡಲಾ ಗುವುದು. ಕರಾವಳಿ ಹಾಗೂ ಮಲೆನಾಡು ಪ್ರದೇಶಗಳ ರೈತರನ್ನು ತೀವ್ರವಾಗಿ ಬಾಧಿಸಿರುವ ಅಡಿಕೆ ಬೆಳೆಯ ಕೊಳೆರೋಗಕ್ಕೆ 15 ದಿನಗಳೊಳಗೆ ಪರಿಹಾರ ಘೋಷಿಸುವುದಾಗಿ ಮುಖ್ಯಮಂತ್ರಿಗಳು ಈಗಾಗಲೇ ತಿಳಿಸಿದ್ದಾರೆ ಎಂದು ಗಂಗಣ್ಣ ನುಡಿದರು.

ಕುಮಾರಸ್ವಾಮಿ ಘೋಷಿಸಿದ ಸಾಲಮನ್ನಾ ಘೋಷಣೆಯ ಫಲ ಎಲ್ಲಾ ರೈತರಿಗೂ ದೊರೆಯುತಿದ್ದು, ಈ ತಿಂಗಳ ಕೊನೆಯೊಳಗೆ ಎಲ್ಲರೂ ಬ್ಯಾಂಕ್‌ಗಳಿಗೆ ತೆರಳಿ ಅಲ್ಲಿ ನೀಡುವ ಸರಳವಾದ ಅರ್ಜಿಯನ್ನು ಭರ್ತಿ ಮಾಡಿ ದಾಖಲೆಗಳೊಂದಿಗೆ ನೀಡಿದರೆ ನ.10ರೊಳಗೆ ಸರಕಾರದಿಂದ ಋಣಮುಕ್ತ ಪತ್ರ ರೈತರ ಕೈಸೇರಲಿದೆ ಎಂದರು.

ಜಿಲ್ಲೆಯ ಮರಳು ಸಮಸ್ಯೆ, ಟೋಲ್ ಸಂಗ್ರಹ ಪ್ರಕರಣ ಶೀಘ್ರ ಬಗೆಹರಿಯುವ ವಿಶ್ವಾಸವಿದೆ. ಕಾಪುವಿನಲ್ಲಿ ಸೂಕ್ತ ಜಾಗವನ್ನು ತೋರಿಸಿದರೆ, 15 ದಿನದೊಳಗೆ ಸಾರಿಗೆ ಸಚಿವರನ್ನು ಕರೆತಂದು ಸುಸಜ್ಜಿತ ಬಸ್‌ನಿಲ್ದಾಣಕ್ಕೆ ಶಂಕು ಸ್ಥಾಪನೆ ನೆರವೇರಿಸುವ ಭರವಸೆಯನ್ನು ಗಂಗಣ್ಣ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News