ಅ. 10: ಡಾ.ಎ.ವಿ.ಬಾಳಿಗಾ ಆಸ್ಪತ್ರೆಯಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ

Update: 2018-10-09 16:28 GMT

ಉಡುಪಿ, ಅ.9: ದೊಡ್ಡಣಗುಡ್ಡೆಯ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ವತಿಯಿಂದ ನಾಳೆ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯನ್ನು ಆಚರಿಸಲಾಗುತಿದ್ದು, ಇಂದಿನ ಯುವಜನತೆಯ ಹೆತ್ತವರು ಹಾಗೂ ಕುಟುಂಬಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ ಬಾರಿಯ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯನ್ನು ‘ಯುವಜನತೆ ಮತ್ತು ಮಾನಸಿಕ ಆರೋಗ್ಯ’ ಎಂಬ ಘೋಷ ವಾಕ್ಯದಡಿ ಆಚರಿಸಲಾಗುತಿದ್ದು, ಯುವ ಜನರ ಮಾನಸಿಕ ಆರೋಗ್ಯಕ್ಕೆ ಬಹಳಷ್ಟು ಪ್ರಾಮುಖ್ಯತೆ ನೀಡಬೇಕು ಎಂಬುದೇ ಇದರ ಉದ್ದೇಶವಾಗಿದೆ ಎಂದು ಆಸ್ಪತ್ರೆಯ ನಿರ್ದೇಶಕ, ಖ್ಯಾತ ಮನೋವೈದ್ಯರಾದ ಡಾ.ಪಿ.ವಿ.ಭಂಡಾರಿ ತಿಳಿಸಿದ್ದಾರೆ.

ಅ. 10ರಂದು ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮವನ್ನು ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ಕೆನರಾ ಬ್ಯಾಂಕಿನ ನಿವೃತ್ತ ಪ್ರಬಂಧಕರಾದ ಮೀನಾಕ್ಷಿ ಭಂಡಾರಿ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಡಾ.ಎ.ವಿ.ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ.ಪಿ.ವಿ.ಭಂಡಾರಿ ವಹಿಸಲಿದ್ದಾರೆ. ಖ್ಯಾತ ವಿಮರ್ಶಕ ಹಾಗೂ ಚಿಂತಕ ಜಿ.ರಾಜಶೇಖರ್ ಮುಖ್ಯಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ವಿಶುಶೆಟ್ಟಿ ಅಂಬಲಪಾಡಿ, ನಿತ್ಯಾನಂದ ಒಳಕಾಡು, ರೋಟರಿ ಶಂಕರಪುರದ ಅಧ್ಯಕ್ಷ ಚಂದ್ರ ಪೂಜಾರಿ ಹಾಗೂ ಬ್ರಹ್ಮಾವರ ರೋಟರಿ ಅಧ್ಯಕ್ಷ ಸುಧೀರ್ ಶೆಟ್ಟಿ ಇವರನ್ನು ಸನ್ಮಾನಿಸಲಾಗುವುದು. ಉದ್ಘಾಟನೆಯ ಬಳಿಕ ‘ಮೌಢ್ಯನಂಬಿಕೆಗಳು ಮತ್ತು ಮಾನಸಿಕ ಖಾಯಿಲೆಗಳು’ ಕುರಿತು ಡಾ.ಪಿ.ವಿ.ಭಂಡಾರಿ, ‘ಅಲ್ಪ ಪ್ರಮಾಣದ ಮನೋಬೇನೆಗಳನ್ನು ಗುರುತಿಸುವಿಕೆ’ ಕುರಿತು ಆಪ್ತ ಸಮಾಲೋಚಕರಾದ ಜೀವನ್ ಲೇವಿಸ್ ಹಾಗೂ ‘ತೀವ್ರ ತರಹದ ಮಾನಸಿಕ ಕಾಯಿಲೆ ಮತ್ತು ಗುರುತಿಸುವಿಕೆ’ ಕುರಿತು ಮನೋವೈದ್ಯ ಡಾ.ದೀಪಕ್ ಮಲ್ಯ ಮಾಹಿತಿ ನೀಡಲಿದ್ದಾರೆ ಎಂದು ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News