ಬ್ರಹ್ಮೋಸ್ ಇಂಜಿನಿಯರ್ ನಿಶಾಂತ್ ಎಟಿಎಸ್‌ ಕಸ್ಟಡಿಗೆ

Update: 2018-10-09 16:45 GMT

ನಾಗಪುರ, ಅ.9: ಬೇಹುಗಾರಿಕೆಯ ಆರೋಪದಲ್ಲಿ ಬಂಧಿತನಾದ ಬ್ರಹ್ಮೋಸ್ ಏರೋಸ್ಪೇಸ್ ಇಂಜಿನಿಯರ್ ನಿಶಾಂತ್ ಅಗರ್‌ವಾಲ್, ‘ನೇಹಾ ಶರ್ಮಾ’ ಹಾಗೂ ‘ಪೂಜಾ ರಂಜನ್’ ಎಂಬ ಎರಡು ಫೇಸ್‌ಬುಕ್ ಖಾತೆಗಳ ಮೂಲಕ ಪಾಕಿಸ್ತಾನದ ಶಂಕಿತ ಗುಪ್ತಚರ ಏಜೆಂಟ್‌ಗಳ ಜೊತೆ ಸಂಪರ್ಕದಲ್ಲಿದ್ದನೆಂದು ಉತ್ತರಪ್ರದೇಶ ಪೊಲೀಸರು ತಿಳಿಸಿದ್ದಾರೆ.

ಬೇಹುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿ ನಿಶಾಂತ್ ಅಗರ್‌ವಾಲ್‌ನನ್ನು ಕೂಲಂಕಶವಾಗಿ ವಿಚಾರಣೆಗೊಳಪಡಿಸಲು ಲಕ್ನೋಗೆ ಕೊಂಡೊಯ್ಯವುದಕ್ಕಾಗಿ ಆತನಿಗೆ ಸಂಚಾರ (ಟ್ರಾನ್ಸಿಟ್) ರಿಮಾಂಡ್ ಕೋರಿ ಉತ್ತರಪ್ರದೇಶದ ಭಯೋತ್ಪಾದಕ ನಿಗ್ರಹದಳವು ಮಂಗಳವಾರ ಇಲ್ಲಿನ ಕಿರಿಯ ಮ್ಯಾಜಿಸ್ಟ್ರೇಟ್ ಪ್ರಥಮ ದರ್ಜೆ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಈ ವಿಷಯವನ್ನು ತಿಳಿಸಿದೆ.

ನ್ಯಾಯಾಲಯವು ಉತ್ತರಪ್ರದೇಶ ಎಟಿಎಸ್‌ಗೆ 3 ದಿನಗಳ ಸಂಚಾರಿ ರಿಮಾಂಡ್‌ನಲ್ಲಿ ಅಗರ್‌ವಾಲ್‌ನನ್ನು ಹಸ್ತಾಂತರಿಸಿದೆಯೆಂದು, ಮಹಾರಾಷ್ಟ್ರ ಎಟಿಎಸ್ ಪರವಾಗಿ ವಾದಿಸಿದ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಎಸ್.ಜೆ. ಬಾಗ್ಡೆ ತಿಳಿಸಿದ್ದಾರೆ.

ಉತ್ತರಪ್ರದೇಶ ಹಾಗೂ ಮಹಾರಾಷ್ಟ್ರದ ಎಟಿಎಸ್ ದಳಗಳು ಸೋಮವಾರ ನಾಗಪುರದಲ್ಲಿ ಬ್ರಹ್ಮೋಸ್ ಕ್ಷಿಪಣಿ ಘಟಕದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ, ಪಾಕಿಸ್ತಾನಕ್ಕೆ ತಾಂತ್ರಿಕ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪದಲ್ಲಿ ನಿಶಾಂತ್ ಅಗರ್‌ವಾಲ್‌ನನ್ನು ಬಂಧಿಸಿದ್ದರು.

ಅಗರ್‌ವಾಲ್, ಪಾಕಿಸ್ತಾನದ ಬೇಹುಗಾರರು ನಿರ್ವಹಿಸುತ್ತಿದ್ದರೆಂದು ಶಂಕಿಸಲಾದ ‘ನೇಹಾ ಶರ್ಮಾ’ ಹಾಗೂ ‘ಪೂಜಾ ರಂಜನ್’ ಎಂಬ ಎರಡು ಫೇಸ್‌ಬುಕ್ ಖಾತೆಗಳ ಜೊತೆ ಸಂಪರ್ಕದಲ್ಲಿದ್ದನೆಂದು ಉ.ಪ್ರ.ಎಟಿಎಸ್ ಆರೋಪಿಸಿದೆ. ಈ ಎರಡು ಖಾತೆಗಳು ಇಸ್ಲಾಮಾಬಾದ್‌ನಿಂದಲೇ ಕಾರ್ಯನಿರ್ವಹಿಸುತ್ತಿದ್ದವೆಂದು ಅದು ಹೇಳಿದೆ.

ಇಂತಹ ನಕಲಿ ಫೇಸ್‌ಬುಕ್‌ ಖಾತೆಗಳನ್ನು ಬಳಸಿಕೊಂಡು, ಪಾಕ್ ಬೇಹುಗಾರರು ಭಾರತದ ಹಿರಿಯ ಅಧಿಕಾರಿಗಳ ಜೊತೆ ಸಂಪರ್ಕ ಸಾಧಿಸುತ್ತಿದ್ದರು ಎಂದು ಎಟಿಎಸ್ ಹೇಳಿದೆ.

ಅಗರ್‌ವಾಲ್ ಅತ್ಯಂತ ಸಂವೇದನಕಾರಿ ವೃತ್ತಿಯಲ್ಲಿದ್ದ ಹೊರತಾಗಿಯೂ, ಇಂಟರ್‌ನೆಟ್‌ನಲ್ಲಿ ಲಘುವಾಗಿ ಸಂಪರ್ಕದಲ್ಲಿದ್ದ ಪರಿಣಾಮವಾಗಿ ಆತ ಸುಲಭ ಗುರಿಯಾಗಿದ್ದ ಎಂದು ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ.

ಅಗರ್‌ವಾಲ್ ಲಿಂಕೆಡ್‌ಇನ್ ಖಾತೆಯಲ್ಲೂ ಸಕ್ರಿಯವಾಗಿದ್ದನೆಂದು ಅವರು ಹೇಳಿದ್ದಾರೆ. ಉನ್ನತಮಟ್ಟದ ಸಂಕ್ಷಿಪ್ತ ಮಾಹಿತಿಯು ಆರೋಪಿಯ ಖಾಸಗಿ ಲ್ಯಾಪ್‌ಟಾಪ್‌ನಲ್ಲಿ ಶೇಖರಿಸಲಾಗಿತ್ತು ಎಂದು ಎಟಿಎಸ್ ಅಧಿಕಾರಿ ತಿಳಿಸಿದ್ದಾರೆ.

ಅಗರ್‌ವಾಲ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 3,4,5 ಹಾಗೂ 9ರ ಅಧಿಕೃತ ಗೌಪ್ಯತೆಗಳ ಕಾಯ್ದೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ 121(ಎ) ಸೆಕ್ಷನ್‌ನಡಿ ಪ್ರಕರಣ ದಾಖಲಿಸಲಾಗಿದೆ. ಅತ್ಯಂತ ರಹಸ್ಯವಾದ ದಾಖಲೆಗಳನ್ನು ಒಳಗೊಡ ಕಂಪ್ಯೂಟರ್ ಒಂದನ್ನು ಅವರ ನಾಗಪುರ ನಿವಾಸದಿಂದ ವಶಪಡಿಸಿಕೊಳ್ಳಲಾಗಿದೆಯೆಂದು ಉತ್ತರಪ್ರದೇಶದ ಎಟಿಎಸ್ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News