ಹಿಂದೂಧರ್ಮಕ್ಕಾಗಿ ಕೆಲಸ ಮಾಡುವ ಸನಾತನ ಸಂಸ್ಥಾ ದೇಶವಿರೋಧಿಯಲ್ಲ: ಗೋವಾ ಸಚಿವನ ಹೇಳಿಕೆ

Update: 2018-10-09 16:52 GMT

ಪಣಜಿ, ಅ.9: ಗೋವಾ ಸಚಿವ ಹಾಗೂ ಮಹಾರಾಷ್ಟ್ರವಾದಿ ಗೋಮಾಂತ ಪಕ್ಷ(ಎಂಜಿಪಿ)ದ ನಾಯಕ ಸುದಿನ್ ಧಾವಳೀಕರ್ ಅವರು ಶಂಕಿತ ಕೇಸರಿ ಉಗ್ರಗಾಮಿ ಸಂಘಟನೆ ಸನಾತನ ಸಂಸ್ಥಾವನ್ನು ಸಮರ್ಥಿಸಿಕೊಂಡಿದ್ದಾರೆ ಹಾಗೂ ಅದು ಹಿಂದೂ ಧರ್ಮ ಹಾಗೂ ಸಂಸ್ಕೃತಿಯ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದೆಯೇ ಹೊರತು ದೇಶವಿರೋಧಿಯಲ್ಲವೆಂದು ಹೇಳಿದ್ದಾರೆ.

ಸನಾತನ ಸಂಸ್ಥಾಗೆ ಗೋವಾದಲ್ಲಿ ರಾಜಕೀಯ ಬೆಂಬಲವಿದ್ದುದರಿಂದ 2009ರಲ್ಲಿ ಅದು ಮಡ್‌ಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಅದು ಶಾಮೀಲಾಗಿತ್ತೆಂಬ ಆರೋಪಗಳ ಹೊರತಾಗಿಯೂ ನಿಷೇಧಕ್ಕೊಳಗಾಗುವುದರಿಂದ ತಪ್ಪಿಸಿಕೊಂಡಿತೆಂದು ಕುಟುಕು ಕಾರ್ಯಾಚರಣೆಯೊಂದನ್ನು ನಡೆಸಿದ ಸುದ್ದಿವಾಹಿನಿ ಬಹಿರಂಗಪಡಿಸಿದ ಮರುದಿನವೇ ಧಾವಳೀಕರ್ ಈ ಹೇಳಿಕೆ ನೀಡಿದ್ದಾರೆ.

 2009ರ ನವೆಂಬರ್‌ನಲ್ಲಿ ಸನಾತನ ಸಂಸ್ಥೆಯ ಕಾರ್ಯಕರ್ತರು ಗೋವಾದ ಮಡ್‌ಗಾಂವ್‌ಗೆ ಬೈಕ್‌ನಲ್ಲಿ ಸ್ಫೋಟಕಗಳನ್ನು ಕೊಂಡೊಯ್ಯುತ್ತಿದ್ದಾಗ, ಅದು ಆಕಸ್ಮಿಕವಾಗಿ ಸ್ಫೋಟಗೊಂಡಿದ್ದರಿಂದ ಇಬ್ಬರೂ ಮೃತಪಟ್ಟಿದ್ದರು.

ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್, ಗೋವಿಂದ ಪನ್ಸಾರೆ, ಎಂ.ಎಂ. ಕಲಬುರ್ಗಿ ಹಾಗೂ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣಗಳಲ್ಲೂ ಸನಾತನ ಸಂಸ್ಥಾದ ಕಾರ್ಯಕರ್ತರ ಕೈವಾಡವಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.

ಆದಾಗ್ಯೂ ಈ ಪ್ರಕರಣಗಳಲ್ಲಿ ತನ್ನ ಕೈವಾಡವಿರುವುದನ್ನು ಸನಾತನ ಸಂಸ್ಥೆ ತಳ್ಳಿಹಾಕಿದೆ. ಈ ಸಂಘಟನೆಯ ಮುಖ್ಯಕಚೇರಿಯು ಉತ್ತರ ಗೋವಾದ ರಾಮನಾಥಿ ಗ್ರಾಮಲ್ಲಿದೆ.

ಕ್ರಿಮಿನಲ್ ಚಟುವಟಿಕೆಗಳಲ್ಲಿ ಸನಾತನ ಸಂಸ್ಥೆಯ ಕೈವಾಡದ ಆರೋಪಗಳ ಬಗ್ಗೆ ಪತ್ರಕರ್ತರು ಸಚಿವ ಧಾವಳೀಕರ್ ಅವರನ್ನು ಪ್ರಶ್ನಿಸಿದಾಗ ಉತ್ತರಿಸುತ್ತಾ, ಈ ವಿವಿಧ ಪ್ರಕರಣಗಳ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ಸನಾತನ ಸಂಸ್ಥಾದ ಕಾರ್ಯಕರ್ತರು ನಿಜಕ್ಕೂ ತಪ್ಪಿತಸ್ಥರೇ ಎಂಬುದನ್ನು ನ್ಯಾಯಾಲಯ ನಿರ್ಧರಿಸಲಿದೆ. ಸನಾತನ ಸಂಸ್ಥಾವು ಹಿಂದೂಧರ್ಮ ಹಾಗೂ ಸಂಸ್ಕೃತಿಗಾಗಿ ಕೆಲಸ ಮಾಡುತ್ತಿದೆ ಎಂದರು. ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷವು ಗೋವಾದ ಬಿಜೆಪಿ ನೇತೃತ್ವದ ಸರಕಾರದಲ್ಲಿ ಪ್ರಮುಖ ಜೊತೆಗಾರ ಪಕ್ಷವಾಗಿದೆ.

“ನನ್ನ ಕುಟುಂಬ ಹಾಗೂ ನಾನು ಹಿಂದೂ ಧರ್ಮದ ಪ್ರಚಾರಕ್ಕಾಗಿ ಸನಾತನ ಸಂಸ್ಥಾದ ಜೊತೆ ನಂಟು ಹೊಂದಿದ್ದೇವೆ.ಇಂತಹ ಚಟುವಟಿಕೆಗಳನ್ನು ನಡೆಸುವ ಎಲ್ಲಾ ಸಂಘಟನೆಗಳಿಗೂ ನಮ್ಮ ಬೆಂಬಲವಿದೆಯೆಂದು” ಅವರು ಹೇಳಿದ್ದರು. ತಾವು ಸನಾತನ ಸಂಸ್ಥೆಗೆ ಆರ್ಥಿಕವಾಗಿ ನೆರವಾಗಿದ್ದೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಅವರು, ನಾನು ಕೇವಲ ಸಂಘಟನೆಯ ಪತ್ರಿಕೆಗೆ ಜಾಹೀರಾತುಗಳನ್ನು ನೀಡುತ್ತಿರುತ್ತೇನೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News