ಪಾಕ್‌ಗೆ ಚೀನಾದಿಂದ 48 ಸೇನಾ ಡ್ರೋನ್‌ಗಳ ಮಾರಾಟ
Update: 2018-10-09 23:01 IST
ಬೀಜಿಂಗ್, ಅ. 9: ಚೀನಾವು ಪಾಕಿಸ್ತಾನಕ್ಕೆ 48 ಉನ್ನತ ದರ್ಜೆಯ ಸೇನಾ ಡ್ರೋನ್‌ಗಳನ್ನು ಮಾರಾಟ ಮಾಡಲಿದೆ ಎಂದು ಚೀನಾದ ಸರಕಾರಿ ಪತ್ರಿಕೆ ‘ಗ್ಲೋಬಲ್ ಟೈಮ್ಸ್’ ಮಂಗಳವಾರ ವರದಿ ಮಾಡಿದೆ.
ಇದು ಈ ಮಾದರಿಯ ಅತಿ ದೊಡ್ಡ ವ್ಯವಹಾರವಾಗಿದೆ ಎಂದು ಸೇನಾ ವೀಕ್ಷಕರೋರ್ವರು ಹೇಳಿದ್ದಾರೆ.
ಆದರೆ, ಈ ವ್ಯವಹಾರದ ಮೊತ್ತವನ್ನು ಬಹಿರಂಗಪಡಿಸಲಾಗಿಲ್ಲ.
ಸಮೀಕ್ಷೆ ಮತ್ತು ದಾಳಿಯಲ್ಲಿ ಬಳಸಬಹುದಾದ ಬಹುಪಯೋಗಿ ಉನ್ನತ ದರ್ಜೆಯ ಮಾನವರಹಿತ ವಿಮಾನ ‘ವಿಂಗ್ ಲೂಂಗ್ ’ಗಳನ್ನು ಚೆಂಗ್ಡು ಏರ್‌ಕ್ರಾಫ್ಟ್ ಇಂಡಸ್ಟ್ರಿಯಲ್ (ಗ್ರೂಪ್) ಕಂಪೆನಿಯಲ್ಲಿ ನಿರ್ಮಿಸಲಾಗುತ್ತಿದೆ ಎಂದು ಪತ್ರಿಕೆ ತಿಳಿಸಿದೆ.
ಪಾಕಿಸ್ತಾನದ ‘ಸರ್ವ ಋತು ಗೆಳೆಯ’ನಾಗಿರುವ ಚೀನಾವು ಪಾಕಿಸ್ತಾನ ಸೇನೆಯ ಅತಿ ದೊಡ್ಡ ಶಸ್ತ್ರ ಪೂರೈಕೆದಾರನಾಗಿದೆ.
ರಶ್ಯದಿಂದ ಅತ್ಯಾಧುನಿಕ ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಖರೀದಿಸಲು ಭಾರತ ಒಪ್ಪಂದ ಮಾಡಿಕೊಂಡ ಬಳಿಕ ಈ ಬೆಳವಣಿಗೆ ಸಂಭವಿಸಿದೆ.