ಮಂಗಳೂರು ವಿ.ವಿ. ಕ್ರೀಡಾಕೂಟಕ್ಕೆ ಚಾಲನೆ

Update: 2018-10-09 17:33 GMT

ಮೂಡುಬಿದಿರೆ, ಅ.9: ಮಂಗಳೂರು ವಿ.ವಿ. ಮತ್ತು ಆಳ್ವಾಸ್ ಕಾಲೇಜು ಇವುಗಳ ಆಶ್ರಯದಲ್ಲಿ ಸ್ವರಾಜ್ಯ ಮೈದಾನದಲ್ಲಿ  ಮಂಗಳವಾರ ಪ್ರಾರಂಭವಾದ ಮಂಗಳೂರು ವಿ.ವಿ. 38ನೇ ಅಂತರ್ ಕಾಲೇಜು  ಮತ್ತು ವಿಶೇಷ ಸಾಮಥ್ರ್ಯವುಳ್ಳ ಮಕ್ಕಳ ಆಥ್ಲೆಟಿಕ್ಸ್ ಕೂಟಗಳನ್ನು ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು.

ಆಳ್ವಾಸ್ ಎಜ್ಯುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕೆ. ಅಭಯಚಂದ್ರ  ಜೈನ್, ಮಂಗಳೂರು ವಿ.ವಿ. ವೈಸ್ ಛಾನ್ಸೆಲರ್ (ಆ್ಯಕ್ಟಿಂಗ್) ಡಾ.ಕಿಶೋರ್ ಕುಮಾರ್ ಸಿ.ಕೆ. ಧ್ವಜಾರೋಣಗೈದರು ಹಾಗೂ ಕ್ರೀಡಾಪಟುಗಳ ಆಕರ್ಷಕ ಪಥಸಂಚಲನದ ಗೌರವರಕ್ಷೆ ಸ್ವೀಕರಿಸಿದರು. 

ಮಂ.ವಿ.ವಿ ದೈಹಿಕ ಶಿಕ್ಷಣ ನಿರ್ದೇಶಕರ ಸಂಘದ ಅಧ್ಯಕ್ಷ  ವೇಣುಗೋಪಾಲ ನೋಂಡ, ಜಿಲ್ಲಾ  ವಿಶೇಷ ಸಾಮರ್ಥ್ಯವುಳ್ಳ ಮಕ್ಕಳ ಕ್ರೀಡಾಕೂಟದ ಸಂಯೋಜಕ, ಮಂಗಳೂರು ಸೈಂಟ್ ಆಗ್ನೆಸ್ ಸ್ಪೆಶಲ್ ಸ್ಕೂಲ್‍ನ ದೈಹಿಕ ಶಿಕ್ಷಣ ನಿರ್ದೇಶಕ ನಾರಾಯಣ ಉಪಸ್ಥಿತರಿದ್ದರು.

ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಳು, ಆಳ್ವಾಸ್‍ನ ವಿದ್ಯಾರ್ಥಿನಿ ಅಭಿನಯ ಶೆಟ್ಟಿ  ಪ್ರತಿಜ್ಞಾವಿಧಿ ಸ್ವೀಕರಿಸಿದರು. ಆಳ್ವಾಸ್‍ನ ರಾಷ್ಟ್ರೀಯ,ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಳುಗಳಾದ ಸುಪ್ರಿಯಾ, ಚೈತ್ರಾ, ಅನಿಲ್, ಪ್ರಜ್ವಲ್ ಮಂದಣ್ಣ  ಕ್ರೀಡಾಜ್ಯೋತಿಯನ್ನು ಬೆಳಗಿದರು. 

ವಿ.ವಿ. ಕೂಟಗಳಲ್ಲಿ ಹೊಸ ದಾಖಲೆ ಮಾಡುವ ಕ್ರೀಡಾಳುಗಳಿಗೆ ರೂ. 2,000 ನಗದು ನೀಡುವ ಆಳ್ವಾಸ್ ಪರಂಪರೆಯಂತೆ ಕೂಟದ ಪ್ರಾರಂಭದಲ್ಲೇ ಹೊಸ ದಾಖಲೆ ಮಾಡಿರುವ ಆಳ್ವಾಸ್‍ನ ಮನೋಜ್ (20 ಕಿ.ಮೀ. ನಡಿಗೆ) ಮತ್ತು ಭಗತ್ ಶೀತಲ್ (3000 ಮೀ. ಸ್ಟೀಪಲ್ ಚೇಸ್) ಅವರಿಗೆ ತಲಾ ರೂ. 2,000 ನೀಡಲಾಯಿತು. ಅಜ್ಜರಕಾಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರೋಶನ್ ಕುಮಾರ್ ಶೆಟ್ಟಿ ನಿರೂಪಿಸಿ ವಂದಿಸಿದರು.

ಕೂಟ ದಾಖಲೆಗಳು

ಮಂಗಳೂರು ವಿಶ್ವವಿದ್ಯಾನಿಲಯ ಅಥ್ಲೆಟಿಕ್‍ನ ಮೊದಲ ದಿನದಲ್ಲಿ ಆಳ್ವಾಸ್ ಆರು ಕೂಟ ದಾಖಲೆಗಳೊಂದಿಗೆ ಮುನ್ನಡೆ ಸಾಧಿಸಿದೆ. ಮಹಿಳೆಯರ ಸ್ಟೀಪಲ್ ಚೇಸ್‍ನಲ್ಲಿ ಆಳ್ವಾಸ್‍ನ ಭಗತ್ ಶೀತಲ್ ಝಮಾಜಿ 10:50.31 ಸೆಕೆಂಡ್ಸ್‍ನಲ್ಲಿ ಕ್ರಮಿಸಿ ಆಳ್ವಾಸ್‍ನ ಸಫೀಜ ಎಂ.ಪಿ ಹೆಸರಿನ ಹಳೆ ದಾಖಲೆ(11:34.7)ಯನ್ನು ಮುರಿದಿದ್ದಾರೆ. 

100ಮೀಟರ್ ಹರ್ಡಲ್ಸ್‍ನಲ್ಲಿ ಆಳ್ವಾಸ್‍ನ ಪ್ರಿಯಾಂಕ ಸಂಬಾಜಿ ರಾವ್ 14.1 ಸೆಕೆಂಡ್ಸ್‍ನಲ್ಲಿ ಗುರಿಮುಟ್ಟಿ ಆಳ್ವಾಸ್‍ನ ಪುಷ್ಪಾಂಜಲಿ (14.5) ದಾಖಲೆ ಯನ್ನು ಹಿಂದಿಕ್ಕಿದ್ದಾರೆ. ತ್ರಿಪಲ್ ಜಂಪ್‍ನಲ್ಲಿ ಅಳ್ವಾಸ್‍ನ ಸಿವ ಅನ್ಯರಾಸಿ ಎಂ.ಎ 13.22 ಮೀಟರ್ ದೂರ ಜಿಗಿದು  ಅದೇ ಸಂಸ್ಥೆಯ ಶೀನಾ ಎನ್.ವಿ ಹೆಸರಿನ(13.08)ಲ್ಲಿದ್ದ ದಾಖಲೆ ಮುರಿದರು.

ಪುರುಷರ ವಿಭಾಗದ 20 ಕಿಮೀ ನಡಿಗೆಯಲ್ಲಿ ಆಳ್ವಾಸ್‍ನ ಮನೋಜ್ 1:36:27.7 ಸೆಕೆಂಡ್ಸ್‍ನಲ್ಲಿ ಕ್ರಮಿಸಿ ಎಸ್‍ಡಿಎಂ ಉಜಿರೆಯ ವಿನೋದ್ ಹುಗೂರ್ಸ್ ಹೆಸರಿನ(1:39:29.8) ದಾಖಲೆಯನ್ನು ಅಳಿಸಿದ್ದಾರೆ.

ಶಾಟ್‍ಪುಟ್‍ನಲ್ಲಿ ಆಳ್ವಾಸ್‍ನ ಆಶಿಶ್ ಭಲೋಟಿಯಾ 16:45 ಮೀಟರ್ ದೂರಕ್ಕೆ ಎಸೆದು ಆಳ್ವಾಸ್‍ನ ಅಲ್ಫಿನ್(16:45)ದಾಖಲೆಯನ್ನು ಸರಿಗಟ್ಟಿದರು. 400 ಮೀಟರ್ ಓಟದಲ್ಲಿ ಆಳ್ವಾಸ್‍ನ ಮಿಜೊ ಚಾಕೊ ಕುರಿಯನ್ 47.6 ಸೆಕೆಂಡ್ಸ್‍ನಲ್ಲಿ ಕ್ರಮಿಸಿ ಆಳ್ವಾಸ್‍ನ ಕೆ.ಜಿ ಸಂಪ್ರತಿ ಅವರ (48.4) ದಾಖಲೆಯನ್ನು ಅಳಿಸಿ ಹೊಸ ದಾಖಲೆ ಬರೆದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News