ಸ್ನೇಹದೀಪಕ್ಕೆ ಸ್ನೇಹ ಹಸ್ತ ಚಾಚಿದ ಸಚಿವ ಝಮೀರ್ ಅಹ್ಮದ್

Update: 2018-10-11 14:05 GMT

ಮಂಗಳೂರು, ಅ.11: ನಗರದ ಬಿಜೈಯಲ್ಲಿ ಕಾರ್ಯಾಚರಿಸುತ್ತಿರುವ ಸ್ನೇಹದೀಪ್ ಏಡ್ಸ್ ಪೀಡಿತ ಮಕ್ಕಳ ಪಾಲನಾ ಕೇಂದ್ರಕ್ಕೆ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು, ಅಲ್ಪಸಂಖ್ಯಾತ, ವಕ್ಫ್  ಮತ್ತು ಹಜ್ ಸಚಿವ ಬಿ.ಝಡ್. ಝಮೀರ್ ಅಹ್ಮದ್ ಗುರುವಾರ ಭೇಟಿ ನೀಡಿ ಸ್ನೇಹದೀಪ್ ಸಂಸ್ಥೆಗೆ ಸ್ವಂತ ಕಟ್ಟಡ ಖರೀದಿಸಲು ವೈಯಕ್ತಿಕವಾಗಿ 10 ಲಕ್ಷ ರೂ.ವನ್ನು ಘೋಷಿಸಿದರಲ್ಲದೆ ಅಗತ್ಯ ಬಿದ್ದರೆ 6 ತಿಂಗಳ ಬಳಿಕ ಮತ್ತಷ್ಟು ಮೊತ್ತ ನೀಡುವುದಾಗಿ ಭರವಸೆ ನೀಡಿದರು.

ಸ್ನೇಹದೀಪ್ ಸಂಸ್ಥೆಯು ತಬಸ್ಸುಮ್ ಅವರ ನೇತೃತ್ವದಲ್ಲಿ 8 ವರ್ಷಗಳಿಂದ ಬಿಜೈ ಕಾಪಿಕಾಡ್‌ನ ಬಾಡಿಗೆ ಮನೆಯೊಂದರಲ್ಲಿ ಕಾರ್ಯಾಚರಿಸುತ್ತಿದೆ. ಇಲ್ಲಿ ರಾಜ್ಯದ ವಿವಿಧ ಕಡೆಯ 22 ಎಚ್‌ಐವಿ ಸೋಂಕು ಬಾಧಿತ ಹೆಣ್ಮಕ್ಕಳನ್ನು ಪೋಷಿಸಲಾಗುತ್ತಿದೆ. ಮಾಸಿಕ 75,000 ರೂ. ಖರ್ಚಾಗುತ್ತಿದ್ದು, ಬಹಳ ಕಷ್ಟದಲ್ಲಿ ಮುನ್ನಡೆಯುತ್ತಿರುವುದನ್ನು ಮನಗಂಡ ಸಚಿವ ಝಮೀರ್ ಅಹ್ಮದ್ ಸ್ನೇಹದೀಪ್ ಸಂಸ್ಥೆಗೆ ಸ್ವಂತ ಕಟ್ಟಡ ಖರೀದಿಸಲು 10 ಲಕ್ಷ ರೂ. ನೀಡುವುದಾಗಿ ತಿಳಿಸಿದರು.

ಸಚಿವರ ಭೇಟಿ ಸಂದರ್ಭ ಕಣಚೂರು ಮೋನು, ಯು.ಟಿ.ಇಫ್ತಿಕಾರ್, ಅಬ್ದುರ್ರವೂಫ್ ಪುತ್ತಿಗೆ, ಮಕ್ಕಳ ಕಲ್ಯಾಣ ಇಲಾಖಾಧಿಕಾರಿ ಉಸ್ಮಾನ್, ವಕ್ಫ್ ಜಿಲ್ಲಾಧಿಕಾರಿ ಹಾಜಿ ಅಬೂಬಕರ್, ಟಿ.ಎಂ.ಶಹೀದ್ ಸುಳ್ಯ, ಕೆ.ಎಸ್.ಲತೀಫ್ ತುಂಬೆ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭ ಸಂಸ್ಥೆಯ ವತಿಯಿಂದ ಸಚಿವ ಝಮೀರ್ ಅಹ್ಮದ್ ಅವರನ್ನು ಸನ್ಮಾನಿಸಲಾಯಿತು. ಸ್ನೇಹದೀಪಕ್ಕೆ ಕಟ್ಟಡ ಖರೀದಿಗೆ ಸಂಬಂಧಿಸಿದಂತೆ ಕಣಚೂರು ಮೋನು, ಯು.ಟಿ.ಇಫ್ತಿಕಾರ್ ಹಾಗೂ ರಶೀದ್ ವಿಟ್ಲ ಅವರನ್ನು ಸಂಚಾಲಕರನ್ನಾಗಿ ಸಚಿವರು ನೇಮಿಸಿದರು. ಸ್ನೇಹದೀಪ್ ಅಧ್ಯಕ್ಷೆ ತಬಸ್ಸುಮ್ ಪ್ರಸ್ತಾವನೆಗೈದರು. ಟ್ರಸ್ಟಿ ರಶೀದ್ ವಿಟ್ಲ ಸ್ವಾಗತಿಸಿ, ವಂದಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News