ಪ್ರೇಯಸಿಯ ಖರ್ಚಿಗಾಗಿ ಹಣ ಕದ್ದು ಸಿಕ್ಕಿಬಿದ್ದ ಗೂಗಲ್ ಇಂಜಿನಿಯರ್

Update: 2018-10-11 12:56 GMT

ಹೊಸದಿಲ್ಲಿ,ಅ.11: ಪ್ರೇಯಸಿಯ ಖರ್ಚು ಭರಿಸಲಿಕ್ಕಾಗಿ ಗೂಗಲ್ ಇಂಜಿನಿಯರ್ ಓರ್ವ ಹಣ ಕಳವುಗೈದ ಬಗ್ಗೆ ವರದಿಯಾಗಿದೆ. ದಿಲ್ಲಿ ತಾಜ್‍ಪ್ಯಾಲೆಸ್‍ನಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ 10,000 ರೂ. ಕಳವು ಮಾಡಿದ ಬಗ್ಗೆ ಗರ್ವೀತ್ ಸಾಹ್ನಿ ಎಂಬ 24ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಈತನ ಕೈಯಲ್ಲಿದ್ದ 3000 ರೂ. ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸೆಪ್ಟಂಬರ್ 11ರಂದು ತಾಜ್ ಪ್ಯಾಲೆಸ್‍ನಲ್ಲಿ ಐಬಿಎಂ ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ದೇವಯಾನಿ ಜೈನ್ ಎಂಬವರ ಬ್ಯಾಗಿನಿಂದ 10,000 ರೂ. ಕಳ್ಳತನವಾಗಿತ್ತು.  ನಂತರ ದೇವಯಾನಿ ಪೊಲೀಸರಿಗೆ ದೂರು ನೀಡಿದ್ದರು. ಸಿಸಿಟಿವಿಯ ದೃಶ್ಯವನ್ನು ಪರೀಶಿಲಿಸಿದ ಪೊಲೀಸರು ಕದ್ದ ವ್ಯಕ್ತಿಯನ್ನು ಗುರುತಿಸಿದರು.

ಆತ ಕಾರ್ಯಕ್ರಮಕ್ಕೆ ಟ್ಯಾಕ್ಸಿ ಕಾರಿನಲ್ಲಿ ಬಂದಿದ್ದಾನೆ ಎಂಬುದು ಪೊಲೀಸರಿಗೆ ಅರಿವಾಯಿತು. ಸಿಸಿಟಿವಿಯಲ್ಲಿ ಕಾರಿನ ನಂಬರ್ ದಾಖಲಾಗಿತ್ತು. ಕಾರ್ಯಕ್ರಮಕ್ಕೆ ಆಹ್ವಾನ ನೀಡಿದವರ ಪಟ್ಟಿಯನ್ನು ಪೊಲೀಸರು ಪರಿಶೀಲಿಸಿದಾಗ ಆರೋಪಿಯ ಗುರುತು ಪತ್ತೆಯಾಗಿತ್ತು.  ಟ್ಯಾಕ್ಸಿ ಚಾಲಕನಲ್ಲಿ ವಿಚಾರಿಸಿದ ಪೊಲೀಸರು ಯಾವ ಫೋನ್ ನಂಬರ್‍ನಿಂದ ತಾಜ್‍ಗೆ ಬರಲು ಕಾರು ಬುಕ್ ಮಾಡಿದ್ದಾನೆ ಎಂದು ತಿಳಿದುಕೊಂಡರು.  ಆದರೆ ಆ ನಂಬರ್ ಸ್ವಿಚ್‍ಆಫ್ ಆಗಿತ್ತು. ನಂತರ ಆರೋಪಿಯ ಹೊಸ ನಂಬರನ್ನುಪತ್ತೆ ಹಚ್ಚಿ ನಡೆಸಿದ ತನಿಖೆಯಲ್ಲಿ ಆರೋಪಿಯನ್ನು ಆತನ ಮನೆಯಿಂದ ಪೊಲೀಸರು ಬಂಧಿಸಿದ್ದಾರೆ.

ತಾನು ತೀವ್ರ ಆರ್ಥಿಕ ಅಡಚಣೆ ಎದುರಿಸುತ್ತಿದ್ದೇನೆ. ಪ್ರೇಯಸಿಯ ಖರ್ಚು ಭರಿಸಲು ಸಾಧ್ಯವಾಗುವುದಿಲ್ಲ ಎಂದು ಪೊಲೀಸರಿಗೆ ಆರೋಪಿ ತಿಳಿಸಿದ್ದಾನೆಂದು ಡೆಪ್ಯುಟಿ ಪೊಲೀಸ್ ಕಮಿಶನರ್ ಮಧುರ್ ವರ್ಮ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News