ಇರಾನ್ ನಲ್ಲಿ ಗೃಹಬಂಧನಕ್ಕೊಳಗಾದ ಉ.ಕ.ಜಿಲ್ಲೆಯ ಮೀನುಗಾರರ ಬದುಕು ಅತಂತ್ರ

Update: 2018-10-11 14:45 GMT
ಬಂಧಿತ ಮೀನುಗಾರರು

ಭಟ್ಕಳ, ಅ. 11: ಕಳೆದ ಎರಡುವರೆ ತಿಂಗಳಿಂದ ಅಕ್ರಮ ಗಡಿ ಪ್ರವೇಶದ ಆರೋಪದಡಿ ಇರಾನ್ ದೇಶದ ನೌಕಪಡೆಯಿಂದ ಗೃಹಬಂಧನಕ್ಕೊಳಗಾಗಿದ್ದ ಉತ್ತರಕನ್ನಡ ಜಿಲ್ಲೆಯ ಭಟ್ಕಳ, ಮುರುಡೇಶ್ವರ, ಕುಮಟಾದ ಸುಮಾರು 18 ಮೀನುಗಾರರನ್ನು ಬಿಡುಗಡೆಗೊಳಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಗುರುವಾರ ಗೃಹಬಂಧನಕ್ಕೊಳಪಟ್ಟಿರುವ 1 8ಮಂದಿ ಮೀನುಗಾರರ ಕುಟುಂಬಸ್ಥರು ಇಲ್ಲಿನ ಸಹಾಯಕ ಆಯುಕ್ತರ ಮೂಲಕ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರಿಗೆ ಮನವಿ ಸಲ್ಲಿಸಿದರು.

ಭಟ್ಕಳ ತಾಲೂಕಿನ ಹೆಬಳೆ ಪಂಚಾಯತ್ ವ್ಯಾಪ್ತಿಯ ತೆಂಗಿನಗುಂಡಿ, ಜಾಮಿಯಾಬಾದ್, ಮುರುಡೇಶ್ವರ, ಕುಮಟಾ ತಾಲೂಕಿನ ಹೊನ್ನಾಳ್ಳಿ ಭಾಗದಲ್ಲಿ ನಾಖುದಾ ಸಮುದಾಯ (ಮೀನುಗಾರಿ ವೃತ್ತಿ ಮಾಡುತ್ತಿರುವ ಮುಸ್ಲಿಮ್ ಸಮುದಾಯ) ಕಳೆದ ಹತ್ತಾರು ವರ್ಷಗಳಿಂದ ದುಬೈ ಮತ್ತಿತರ ಗಲ್ಫ್ ರಾಷ್ಟ್ರಗಳಲ್ಲಿ ಮೀನುಗಾರಿಕೆ ಮಾಡಿಕೊಂಡು ಬದುಕುತ್ತಿದ್ದು 2-3 ವರ್ಷಗಳಿಗೊಮ್ಮೆ ತಮ್ಮ ತಮ್ಮ ಮನೆಗಳಿಗೆ ಬಂದು ಹೋಗಿ ಇಲ್ಲಿನ ಕುಟುಂಬವನ್ನು ನಿರ್ವಹಣೆ ಮಾಡುತ್ತಿದ್ದಾರೆ.

ದುಬೈಯಲ್ಲಿ ಮೀನುಗಾರಿಕೆಯೇ ಅವರ ಪ್ರಮುಖ ಕಸುಬಾಗಿದ್ದು ಅಲ್ಲಿಯ ನಿವಾಸಿಗಳ ಪ್ರಯೋಜಕತ್ವದಲ್ಲಿ ತಿಂಗಳುಗಟ್ಟಲೆ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದಾರೆ. ಆದರೆ ಕಳೆದ 2 ತಿಂಗಳ ಹಿಂದೆ ಮೀನುಗಾರಿಕೆಗೆ ತೆರಳಿದ್ದ 18 ಜನರ ತಂಡವನ್ನು ಅರಬ್ಬಿ ಸಮುದ್ರದ ದುಬೈ ಗಡಿಯಲ್ಲಿ ಇರಾನಿ ನೌಕಪಡೆ ಅಧಿಕಾರಿಗಳು ಅಕ್ರಮ ಗಡಿಪ್ರವೇಶ ಮಾಡಿದ್ದಾರೆಂದು ಆರೋಪಿಸಿ 12 ಜರನ್ನು ಗೃಹಬಂಧನದಲ್ಲಿದ್ದು, ಇನ್ನುಳಿದ 6 ಮಂದಿ ಮೀನುಗಾರರನ್ನು ಬಂಧಿಸಿದ ಇರಾನಿನ ಜೈಲಿನಲ್ಲಿಟ್ಟಿರುವುದಾಗಿ ಗೃಹಬಂಧನಕ್ಕೊಳಗಾಗಿರುವ ಭಟ್ಕಳದ ಜಾಮಿಯಾಬಾದ್ ನ ನಿವಾಸಿ ಉಸ್ಮಾನ್ ಇಸಾಖ್ ಬೊಂಬಾಯಿಕರ್ ವಾಟ್ಸ್ಆ್ಯಪ್ ಕರೆ ಮೂಲಕ ಭಟ್ಕಳದ ತನ್ನ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ.

ಉಸ್ಮಾನ್ ಹೇಳುವಂತೆ ಜು. 21ರಂದು ದುಬೈಯಿಂದ 2 ಪ್ರತ್ಯೇಕ ಬೋಟ್ ಮೂಲಕ ಮೀನುಗಾರಿಕೆಗೆ ತೆರಳಿದ್ದ 18 ಜನರ ತಂಡ ಅದರಲ್ಲಿ ದುಬೈಯ ಶೇಖ್ ಮರ್ವಾನ್ ಎಂಬವವರೂ ಇದ್ದು ಜು.27 ರಂದು ಇರಾನಿನ ನೌಕಾಪಡೆಯ ಅಧಿಕಾರಿಗಳು ಅಕ್ರಮ ಗಡಿ ಪ್ರವೇಶ ಮಾಡಿದ್ದಾಗಿ ಆರೋಪಿಸಿ  2 ಬೋಟಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಅದರಲ್ಲಿದ್ದ ಆರು ಮಂದಿಯನ್ನು ಬಂಧಿಸುವುದರ ಮೂಲಕ ಇರಾನಿನ ಜೈಲಿಗೆ ಅಟ್ಟಿದ್ದು ಉಳಿದ 12 ಮಂದಿ ಮೀನುಗಾರರನ್ನು ಇರಾನ್ ನ ಖಿಜ್ತ್ ದ್ವಿಪಾದಲ್ಲಿ ಗೃಹಬಂಧನದಲ್ಲಿರಿಸಿದ್ದಾರೆ. ಇಲ್ಲಿ ನಮಗೆ ಊಟಕ್ಕೆ ಯಾವುದೇ ತೊಂದರೆ ಇಲ್ಲದಿದ್ದರೂ ಕಳೆದ ಎರಡುವರೆ ತಿಂಗಳಿನಿಂದ ನಮ್ಮ ಕುಟುಂಬಗಳಿಗೆ ಹಣ ಕಳುಹಿಸದೆ ಅವರು ತೊಂದರೆಯಲ್ಲಿದ್ದಾರೆ. ನಮ್ಮೆಲ್ಲ ಕುಟುಂಬದ ಆರ್ಥಿಕ ಪರಿಸ್ಥಿತಿ ಗಂಭೀರವಾಗಿದ್ದು ಊರಲ್ಲಿ ಕುಟುಂಬ ನಡೆಸುವ ಹೊಣೆ ನಮ್ಮದೇ ಆಗಿರುತ್ತದೆ. ಆ ಕಾರಣಕ್ಕಾಗಿ ಭಾರತ ಸರ್ಕಾರ ನಮ್ಮನ್ನು ಇಲ್ಲಿಂದ ಬಿಡುಗಡೆಗೊಳಿಸುವಂತೆ ಅವರು ಸರ್ಕಾರವನ್ನು ವಿನಂತಿಸಿಕೊಂಡಿದ್ದಾರೆ.

ಗೃಹಬಂಧನಲ್ಲಿರುವ ಅಜ್ಮಲ್ ಶಮಾಲಿ ತಂದೆ ಕುಮಟಾದ ಹೊನ್ನಾಳಿಯ ಮೂಸಾ ಇಬ್ರಾಹಿಮ್ ಶಮಾಲಿ ಕಳೆದ 1 ವರ್ಷದ ಹಿಂದಷ್ಟೆ ದುಬೈಗೆ ಹೋಗಿದ್ದು ಅಲ್ಲಿ ಮೀನುಗಾರಿಕೆಯನ್ನು ಮಾಡಿಕೊಂಡು ಅಷ್ಟಿಷ್ಟಿ ಹಣ ಕಳುಹಿಸುತ್ತಿದ್ದ. ಎರಡು ತಿಂಗಳಿಂದ ಆತ ನಮ್ಮ ಸಂಪರ್ಕಕ್ಕೆ ಬಂದಿಲ್ಲ. ನಿನ್ನೆಯಷ್ಟೆ ಅವರು ಬಂಧನವಾಗಿದೆ ಎಂದು ತಿಳಿದು ಆಕಾಶವೇ ಕಳಚಿಬಿದ್ದಂತಾಗಿದೆ. ಪತ್ನಿ ಮತ್ತು ಇಬ್ಬರು ಮಕ್ಕಳ ಜತೆಗೆ ನಮ್ಮ ಕುಟುಂಬವನ್ನು ನಡೆಸುತ್ತಿದ್ದು ಈಗ ಆತನ ಬಂಧನವಾದ ಸುದ್ದಿಯಿಂದ ಮನೆಯಲ್ಲಿ ಆತನ ಪತ್ನಿ ಮತ್ತು ಮಕ್ಕಳು ಬಹಳ ಚಿಂತಾಕ್ರಾಂತರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಹೊನ್ನಾಳಿಯ ಮುಷ್ತಾಖ್ ದಾವೂದ್ ಶೇಖ್ ಎಂಬುವವ ಇಬ್ಬರು ಭಾವಂದಿರ ಕತೆಯೂ ಇದಕ್ಕೆ ಭಿನ್ನವಾಗಿಲ್ಲ. ಯಾಖೂಬ್ ಎನ್ನುವರು ಕಳೆದ 12 ವರ್ಷಗಳಿಂದ ದುಬೈಯಲ್ಲಿ ಮೀನುಗಾರಿಕೆ ಮಾಡಿಕೊಂಡಿದ್ದರೆ, ಖಾಸಿಂ ಎನ್ನುವವರ ಕಳೆದ ಮೂರು ವರ್ಷಗಳಿಂದ ಮೀನುಗಾರಿಕೆ ಮಾಡುತ್ತಿದ್ದಾರೆ. ಮೀನುಗಾರಿಕೆ ಮಾಡುವಾಗ ಕೆಲವೊಮ್ಮೆ ಆಯಾ ದೇಶದ ಗಡಿ ದಾಟಿ ಹೋಗುತ್ತಾರೆ ಕೆಲವೊಮ್ಮ ಬಂಧನವೂ ಆಗುತ್ತದೆ ಆದರೆ ಕೂಡಲೆ ಕಾನೂನು ಕ್ರಮಗಳ ನಂತರ ಬಿಡುಗಡೆಯಾಗುತ್ತಾರೆ. ಹಿಂದೊಮ್ಮೆ ಖತರ್ ನಲ್ಲಿ ಅಕ್ರಮ ಗಡಿ ಪ್ರವೇಶ ಮಾಡಿದ್ದಾರೆಂದು ಅಲ್ಲಿ ಬಂಧಿತರಾಗಿದ್ದ ಅವರು ಎರಡು ದಿನಗಳಲ್ಲೇ ಬಿಡುಗಡೆಗೊಂಡಿದ್ದರು. ಆದರೆ ಈ ಬಾರಿ ಇರಾನ್ ದೇಶದವರು 2 ತಿಂಗಳು ಮುಗಿದರೂ ಇನ್ನೂ ಬಿಡುಗಡೆಗೊಳಿಸುತ್ತಿಲ್ಲ. ಇದರಿಂದಾಗಿ ನಮ್ಮ ಮನೆಯಲ್ಲಿ ಪರಿಸ್ಥಿತಿ ತುಂಬಾ ಕೆಟ್ಟುಹೋಗಿದ್ದು ಎರಡು ಕುಟುಂಬಗಳು ಕಳೆದ 2 ತಿಂಗಳಿನಿಂದ ಕಣ್ಣೀರಿಡುತ್ತಿವೆ ಎನ್ನುತ್ತಾರೆ.

ಮುಡೇರ್ಶ್ವರದ ಮುಹಮ್ಮದ್ ಹುಸೈನ್ ಎಂಬುವವರು ತಮ್ಮ ಸಹೋದರ ಇಬ್ರಾಹೀಮ್ ಫಖೀರಾ ಮುಲ್ಲಾ ರ ಕುರಿತು ಹೇಳುವುದಿಷ್ಟು. ಇಬ್ರಾಹೀಮ್ ಗೆ 4  ಮಕ್ಕಳಿದ್ದು ಕುಟುಂಬ ನಡೆಸುವ ಎಲ್ಲ ಹೊಣೆಯೂ ಆತನ ಮೇಲಿದೆ. ಈಗ ಆತನ ಬಂಧನದ ಸುದ್ದಿ ಮನೆಯಲ್ಲಿ ನೆಮ್ಮದಿಯನ್ನು ಕೆಡಿಸಿದೆ. ಪತ್ನಿ ಮಕ್ಕಳು ಆತನ ಬರುವಿಕೆಗಾಗಿ ಕಾಯುತ್ತಿದ್ದಾರೆ ಎನ್ನುತ್ತಾರೆ.

ಭಟ್ಕಳದ ಆಥರ್ ಮೊಹಲ್ಲಾದ ಅತಿಖ್ ಸುಲೈಮಾನ್ ಘಾರು ಕಳೆದ ಎರಡು ವರ್ಷಗಳಿಂದ ದುಬೈಯಲ್ಲಿ ನೆಲೆಸಿದ್ದು ಅವರ ತಂದೆ ಸುಲೈಮಾನ್ ಘಾರು ತನ್ನ ಮಗನ ಸ್ಥಿತಿಗೆ ಮಾತೆ ಹೊರಡದಂತಾಡುತ್ತಿದ್ದಾರೆ.

ತಂಝೀಮ್ ಸಂಸ್ಥೆಯಿಂದ ಸರ್ಕಾರಕ್ಕೆ ಮನವಿ

ಭಟ್ಕಳ ಸೇರಿದಂತೆ ಉತ್ತರಕನ್ನಡ ಜಿಲ್ಲೆಯ 18 ಮೀನುಗಾರರು ಅಕ್ರಮ ಗಡಿ ಪ್ರವೇಶದಡಿ ಇರಾನ್ ಸರ್ಕಾರದಿಂದ ಗೃಹಬಂಧನದಲ್ಲಿದ್ದು ರಾಜ್ಯ ಸರ್ಕಾರ ಅವರನ್ನು ಬಿಡುಗಡೆಗೊಳಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕೆಂದು ತಂಝೀಮ್ ಪ್ರಧಾನ ಕಾರ್ಯದರ್ಶಿ ಅಲ್ತಾಫ್ ಮುಹಿದ್ದೀನ್ ಖರೂರಿ, ಉಪಾಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಆಗ್ರಹಿಸಿದ್ದು ಮೀನುಗಾರರನ್ನು ಸುರಕ್ಷಿತವಾಗಿ ಭಾರತಕ್ಕೆ ಮರಳಿಸುವಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೇರಬೇಕೆಂದು ವಿದೇಶಾಂಗ ಸಚಿವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಉಪಾಧ್ಯಕ್ಷ ಇನಾತುಲ್ಲಾ ಶಾಬಂದ್ರಿ ಉತ್ತರಕನ್ನಡ ಜಿಲ್ಲೆಯಲ್ಲಿ ಮುಸ್ಲಿಮ್ ಮೀನುಗಾರರ ಕುಟುಂಬಗಳು ವಾಸಿಸುತ್ತಿದ್ದು ಅವರ ಕಸುಬೇ ಮೀನುಗಾರಿಕೆಯಾಗಿದೆ. ಮೀನುಗಾರಿಕೆಯಿಂದಲೆ ತಮ್ಮ ಬದುಕನ್ನು ಕಟ್ಟಿಕೊಂಡು ಬಂದಿದ್ದಾರೆ. ಎಲ್ಲೆ ಇರಲಿ ಮೀನುಗಾರಿಕೆ ಮಾಡುವುದೇ ಅವರ ಕೆಲಸ. ದುಬೈನಲ್ಲೂ ಅವರು ಮೀನುಗಾರಿಕೆ ತೆರಳಿದ್ದು ಅಲ್ಲಿ ದುಬೈ ಸರಹದ್ದು ಮೀರಿ ಇರಾನ್ ಸರಹದ್ದು ಪ್ರವೇಶ ಮಾಡಿದ್ದಾರೆಂಬ ಆರೋದಡಿ ಅವರನ್ನು ಬಂಧಿಸಲಾಗಿದೆ. ಅವರನ್ನು ಬಿಡುಗಡೆ ಆಗ್ರಹಿಸುವುದು ನಮ್ಮ ಹಕ್ಕಾಗಿದ್ದು ಕೂಡಲೇ ಸರ್ಕಾರ ಮಧ್ಯಸ್ಥಿಕೆ ವಹಿಸುವುದರ ಮೂಲಕ ಅವರನ್ನು ಬಿಡುಗಡಗೊಳಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಭಟ್ಕಳದ ದುಬೈ ಜಮಾಅತ್ ಕೂಡ ಈ ನಿಟ್ಟಿನಲ್ಲಿ ಕ್ರಿಯಾ ಶೀಲವಾಗಿದ್ದು ಅಲ್ಲಿ ಸರ್ಕರದ ಮಟ್ಟದಲ್ಲಿ ಅದು ಒತ್ತಡವನ್ನು ಹಾಕುತ್ತಿದೆ ಎಂದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News