ಉಡುಪಿ: ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆ

Update: 2018-10-11 15:00 GMT

ಉಡುಪಿ, ಅ.11: ಇದೇ ನ.1ರಂದು ನಡೆಯುವ ಜಿಲ್ಲಾಮಟ್ಟದ ಕನ್ನಡ ರಾಜ್ಯೋತ್ಸವ ಆಚರಣೆ ಕುರಿತಂತೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಕಚೇರಿ ಸಭಾಂಗಣದಲ್ಲಿ ಬುಧವಾರ ಪೂರ್ವಭಾವಿ ಸಭೆ ನಡೆಯಿತು.

ಕನ್ನಡ ರಾಜ್ಯೋತ್ಸವದ ಅಂಗವಾಗಿ ಅಂದು ಉಡುಪಿಯ ಬೋರ್ಡ್ ಹೈಸ್ಕೂಲ್ ಮೈದಾನದಲ್ಲಿ ಭುವನೇಶ್ವರಿ ದೇವಿಯ ಸ್ಥಬ್ಧಚಿತ್ರಕ್ಕೆ ಪೂಜೆ ಸಲ್ಲಿಸಿ, ಬೀಡಿನಗುಡ್ಡೆಯ ಮಹಾತ್ಮ ಗಾಂಧೀ ಬಯಲುರಂಗ ಮಂದಿರದವರೆಗೆ ವಿವಿಧ ಇಲಾಖೆಗಳ ಸಾಧನೆ ಬಿಂಬಿಸುವ ಆಕರ್ಷಕ ಟ್ಯಾಬ್ಲೋಗಳ ಮೆರವಣಿಗೆ ನಡೆಯಲಿದ್ದು, ಅರಣ್ಯ, ಅರೋಗ್ಯ, ಪ್ರವಾಸೋದ್ಯಮ, ನಿರ್ಮಿತಿ, ನಗರಸಭೆ, ತೋಟಗಾರಿಕೆ ಸೇರಿದಂತೆ ಪ್ರಮುಖ ಇಲಾಖೆಗಳಿಗೆ ಸ್ಥಬ್ಧಚಿತ್ರ ನಿರ್ಮಿಸುವಂತೆ ಹಾಗೂ ಮೆರವಣಿಗೆಯಲ್ಲಿ ಕನ್ನಡ ಮತ್ತು ಸಂಸ್ಕೃತಿಇಲಾಖೆಯಿಂದ ಕಲಾತಂಡಗಳ ಪ್ರದರ್ಶನ ಏರ್ಪಡಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಬೀಡಿನಗುಡ್ಡೆಯ ಮಹಾತ್ಮ ಗಾಂಧೀ ಬಯಲುರಂಗ ಮಂದಿರದಲ್ಲಿ ಧ್ವಜಾರೋಹಣದ ನಂತರ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಪಥ ಸಂಚಲನ ಏರ್ಪಡಿಸುವ ಕುರಿತಂತೆ ಪೊಲೀಸ್ ಇಲಾಖೆಗೆ ಸೂಚಿಸಿದ ಜಿಲ್ಲಾಧಿಕಾರಿ, ಪಥ ಸಂಚಲನ ನಂತರ ಕನ್ನಡ ನಾಡು ನುಡಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವಂತೆ ಶಿಕ್ಷಣ ಇಲಾಖೆಗೆ ಸೂಚಿಸಿದರು.

ಜಿಲ್ಲೆಯಲ್ಲಿ ಲೋಕಸಭಾ ಉಪ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರು ವುದರಿಂದ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿತರಣೆ ಕುರಿತಂತೆ ಅನುಮತಿ ಯೊಂದಿಗೆ ಚುನಾವಣಾ ಆಯೋಗದ ಸ್ಪಷ್ಠೀಕರಣ ಕೋರಿದ್ದು ಅಲ್ಲಿಂದ ಮಾಹಿತಿ ಬಂದ ನಂತರ, ಆಯ್ಕೆ ಸಮಿತಿ ರಚಿಸಿ ಪ್ರಶಸ್ತಿ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ರಾಜ್ಯೋತ್ಸವ ಅಚರಣೆ ಕುರಿತಂತೆ ವಿವಿಧ ಸಮಿತಿಗಳನ್ನು ರಚಿಸಿದ ಜಿಲ್ಲಾಧಿಕಾರಿ, ಎಲ್ಲಾ ಸಮಿತಿಗಳು ಜವಾಬ್ದಾರಿ ಅರಿತು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News