ಕೇರಳದ ನೆರೆ ಸಂತ್ರಸ್ತರಿಗಾಗಿ ನೂರು ಮನೆಗಳನ್ನು ನಿರ್ಮಿಸಲಿರುವ ಜಮೀಯತೆ ಉಲಮಾ

Update: 2018-10-11 15:26 GMT

ಹೊಸದಿಲ್ಲಿ, ಅ.11: ಕೇರಳದ ನೆರೆ ಸಂತ್ರಸ್ತರಿಗಾಗಿ ನೂರು ಮನೆಗಳನ್ನು ನಿರ್ಮಿಸಲು ನಿರ್ಧರಿಸಿರುವ ಜಮೀಯತೆ ಉಲಮಾ ಹಿಂದ್ ಸೋಮವಾರದಂದು ಎರ್ನಾಕುಲಂನಲ್ಲಿ ಮನೆಗಳಿಗೆ ಶಿಲಾನ್ಯಾಸ ನೆರವೇರಿಸಿತು.

ಪ್ರಧಾನ ಕಾರ್ಯದರ್ಶಿ ಮೌಲಾನ ಮಹಮೂದ್ ಮದನಿ ನೇತೃತ್ವದ ಜಮೀಯತೆಯ ನಿಯೋಗ ಬುಧವಾರದಂದು ಕೇರಳ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿತು ಮತ್ತು ಹೊಸ ಮನೆಗಳಿಗೆ ಶಿಲಾನ್ಯಾಸ ನೆರವೇರಿಸಿತು. ಈ ವೇಳೆ, ಮೊದಲ ಹಂತದಲ್ಲಿ ಜಮೀಯತೆ ವತಿಯಿಂದ ನೂರು ಮನೆಗಳನ್ನು ನಿರ್ಮಿಸಲಾಗುವುದು ಮತ್ತು ಕಟುಬಡವರ ನೂರು ಮನೆಗಳ ದುರಸ್ತಿ ನಡೆಸಲಾಗುವುದು ಎಂದು ಮದನಿ ತಿಳಿಸಿದ್ದಾರೆ. ಈವರೆಗೆ ಜಮೀಯತೆ ರಾಜ್ಯದಲ್ಲಿ ನೆರೆ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳಿಗಾಗಿ ಐದು ಕೋಟಿ ರೂ. ವ್ಯಯಿಸಿದೆ ಮತ್ತು ಇದರಿಂದ 25,000 ಕುಟುಂಬಗಳಿಗೆ ಪ್ರಯೋಜನವಾಗಿದೆ ಎಂದು ಅವರು ತಿಳಿಸಿದ್ದಾರೆ.

ತಮ್ಮ ನೆರವನ್ನು ಸ್ವೀಕರಿಸಿದ ಜನರಿಗೆ ಅವರು ಈ ವೇಳೆ ಧನ್ಯವಾದ ಸೂಚಿಸಿ ಕೃತಜ್ಞತೆಗಳನ್ನು ಅರ್ಪಿಸಿದರು. ಜಮೀಯತೆ ಯಾವುದೇ ಧರ್ಮ, ಜನಾಂಗ, ಅಥವಾ ಜಾತಿಯನ್ನು ನೋಡದೆ ಎಲ್ಲರನ್ನೂ ಸಮಾನವಾಗಿ ಕಂಡಿದೆ. ಆಮೂಲಕ ಎಲ್ಲರಿಗೂ ಸಮಾನವಾಗಿ ನೆರವಿನ ಹಸ್ತಚಾಚಿದೆ ಎಂದು ತಿಳಿಸಿದ ಮೌಲಾನ ಮದನಿ, ವಿಧವೆಯರು ಮತ್ತು ಅಂಗವೈಕಲ್ಯ ಹೊಂದಿರುವವರ ಸೇವೆ ಮಾಡುವುದು ಮೊದಲ ಆದ್ಯತೆಯಾಗಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News