ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ನಲ್ಲಿ ಅನಾಥಾಲಯ ಕಟ್ಟಡಕ್ಕೆ ಶಿಲಾನ್ಯಾಸ

Update: 2018-10-11 15:32 GMT

ಮಂಜನಾಡಿ, ಅ. 11: 1994ರಲ್ಲಿ 25 ಮಕ್ಕಳಿಂದ ಆರಂಭಗೊಂಡ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಸಂಸ್ಥೆಯಲ್ಲಿ ಇದೀಗ 3500 ಅನಾಥ ಮಕ್ಕಳು ಆಶ್ರಯ ಮತ್ತು ಶಿಕ್ಷಣ ಪಡೆಯುತ್ತಿದ್ದಾರೆ. ಸಮಾಜದ ಅಭಿವೃದ್ಧಿಗೆ ಅಬ್ಬಾಸ್ ಉಸ್ತಾದ್‍ರವರ ಇಂತಹ ಯೋಜನೆ ಸಹಕಾರಿಯಾಗಿದೆ ಎಂದು ವಕ್ಪ್  ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.

ಅವರು ಮಂಜನಾಡಿಯ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಬೆಳ್ಳಿಹಬ್ಬ ಆಚರಣೆಯ ಪ್ರಯುಕ್ತ ಸಂಸ್ಥೆಗೆ ಗುರುವಾರ ಭೇಟಿ ನೀಡಿ, ನೂತನವಾಗಿ ನಿರ್ಮಾಣವಾಗಲಿರುವ ಅನಾಥಾಲಯ ಕಟ್ಟಡಕ್ಕೆ ಶಿಲಾನ್ಯಾಸಗೈದ ಬಳಿಕ ಮಾತನಾಡಿದರು.

ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಮೂಲಕ ಅದೆಷ್ಟೋ ಅನಾಥ ಮಕ್ಕಳ ಬದುಕು ಹಸನಾಗಿದೆ. ನಾನೀಗ ರಾಜ್ಯದ ಮಂತ್ರಿ ಆಗಿದ್ದೇನೆ. ಈ ಸಂಸ್ಥೆ ವಕ್ಪ್ ಬೋರ್ಡ್ ನಡಿಯಲ್ಲಿದ್ದರೆ ಸರಕಾರದಿಂದ ಕೊಡುವಂತಹ ಕಾನೂನು ರೀತಿಯ ಎಲ್ಲ  ಅನುದಾನ ಕೊಡಬಹುದು. ಇಲ್ಲದಿದ್ದರೆ ನನ್ನ ವತಿಯಿಂದ ಸಹಾಯ ಮಾಡುತ್ತೇನೆ  ಎಂದರು.

ಪ್ರತಿ ವರ್ಷ ಕನಿಷ್ಠ ಇಪ್ಪತ್ತೈದು ಮಸೀದಿಯ ಇಮಾಮ್ ರನ್ನು ಹಜ್ ಗೆ ಕಳುಹಿಸುತ್ತೇನೆ. ರಾಜ್ಯದಿಂದ ಕನಿಷ್ಠ 25 ಮಂದಿಯನ್ನು ಪ್ರತಿವರ್ಷ ಕಳುಹಿಸುತ್ತಿದ್ದು ಕಳೆದ ಕೆಲವು ವರ್ಷಗಳಿಂದ 5 0ಮಂದಿಯನ್ನು ಕಳುಹಿಸುತ್ತಿದ್ದೇನೆ. ಹಾಗಾಗಿ ಈ ವರ್ಷ ಈ ಸಂಸ್ಥೆಯ ಹತ್ತು ಮಂದಿ ಧಾರ್ಮಿಕ ಗುರುಗಳನ್ನು ಹಜ್ ಗೆ ಕಳುಹಿಸುತ್ತೇನೆ. ಅದಕ್ಕೆ ನನಗೆ ಅರ್ಜಿ ಹಾಕುವುದಷ್ಟೆ ನಿಮ್ಮ ಕೆಲಸ ಎಂದವರು.

ನಾನು ಪರಲೋಕ ಯಶಸ್ಸಿಗಾಗಿಯೇ ಶ್ರಮಿಸುವುದು. ಸಂಪತ್ತು, ಆಯಸ್ಸು, ಆರೋಗ್ಯ, ರಾಜಕೀಯದಲ್ಲಿ ದೊಡ್ಡ ಸ್ಥಾನ ಅಧಿಕಾರ ಕೇಳಬೇಡಿ. ಅದ್ಯಾವುದು ಶಾಶ್ವತವಲ್ಲ. ಅಲ್ ಮದೀನಾ ಜೊತೆಗೆ ನಾನು ಒಬ್ಬ ಸದಸ್ಯ ಎಂದು ತಿಳಿದುಕೊಳ್ಳಿ ಎಂದರು.

ಬಳಿಕ ಕಳೆದ ಸಾಲಿನ ಎಸ್ ಎಸ್ ಎಲ್ ಸಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಸಂಸ್ಥೆಯ ಎಂಟು ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ತಲಾ 10 ಸಾವಿರ ರೂ. ಪ್ರೋತ್ಸಾಹ ಧನ ನೀಡಿದರು.

ಅಲ್ ಮದೀನಾ ಇಸ್ಲಾಮಿಕ್  ಕಾಂಪ್ಲೆಕ್ಸ್ ನ ಅಧ್ಯಕ್ಷ ಪಿ.ಎಂ. ಅಬ್ಬಾಸ್ ಮುಸ್ಲಿಯಾರ್, ಕಣಚೂರು ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ , ವಕ್ಪ್ ಜಿಲ್ಲಾಧ್ಯಕ್ಷ ಯು.ಕೆ. ಮೋನು, ಯು.ಟಿ. ಫರೀದ್ ಫೌಂಡೇಶನ್ ಚೇರ್ ಮೆನ್ ಡಾ. ಯು.ಟಿ. ಇಫ್ತಿಕಾರ್ ಅಲಿ, ಅಲ್ಪಸಂಖ್ಯಾತ ಜಿಲ್ಲಾ ಅಧಿಕಾರಿ ಉಸ್ಮಾನ್, ಸಂಸ್ಥೆಯ ಮೆನೇಜರ್ ಅಬ್ದುಲ್ ಖಾದರ್ ಸಖಾಫಿ, ನರಿಂಗಾನ ಗ್ರಾಮ ಪಂ. ಅಧ್ಯಕ್ಷ ಇಸ್ಮಾಯಿಲ್ ಮೀನಂಕೋಡಿ, ಮಂಜನಾಡಿ ಗ್ರಾಮ ಪಂ. ಅಧ್ಯಕ್ಷ ಮಹಮ್ಮದ್ ಅಸೈ, ಸದಸ್ಯ ಕುಂಞಿ ಬಾವ ಕಲ್ಕಟ್ಟ, ಉದ್ಯಮಿ ಶೌಕತ್ ದೇರಳಕಟ್ಟೆ, ವಕ್ಫ್  ಸಲಹಾ ಸಮಿತಿ ಸದಸ್ಯ ಅಬೂಬಕರ್ ಸಜಿಪ, ಅಲ್ ಮದೀನಾ  ಪ್ರಾಂಶುಪಾಲ ಮುನೀರ್ ಕಾಮಿಲ್ ಸಖಾಫಿ, ಕಾಂಗ್ರೆಸ್ ಕಾರ್ಮಿಕ ಘಟಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮೀರ್ ತುಂಬೆ, ಅಲ್ ಮದೀನಾ ಮಲಾಝ್ ಘಟಕದ ಗೌರವ ಅಧ್ಯಕ್ಷ ಫಾರೂಕ್ ಅಬ್ಬಾಸ್ ಹಾಜಿ ಉಳ್ಳಾಲ, ಯು.ಎಸ್. ಅಬೂಬಕರ್ ಹಾಜಿ ಉಳ್ಳಾಲ ಉಪಸ್ಥಿತರಿದ್ದರು.

ಅಲ್ ಮದೀನಾ ನ್ಯೂಬಿ ಸ್ಕೂಲ್ ನಿರ್ದೇಶಕ ಮನ್ಸೂರ್ ಇಮಾಮಿ ಸ್ವಾಗತಿಸಿದರು. ಲೆಕ್ಕಪರಿಶೋಧಕ ಅಬ್ದುಲ್ ರಝಾಕ್ ಮಾಸ್ಟರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News