ಮಲ್ಪೆ: ಮತ್ತೆ ನೀರಿಗಿಳಿದ ಬೋಟುಗಳು

Update: 2018-10-11 16:23 GMT

ಮಲ್ಪೆ, ಅ.11: ಅರಬ್ಬಿ ಸಮುದ್ರದಲ್ಲಿ ತೀವ್ರ ವಾಯುಭಾರ ಕುಸಿತದಿಂದ ಉಂಟಾದ ಚಂಡಮಾರುತದ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ನೀಡಿದ ಎಚ್ಚರಿಕೆಯಂತೆ ಅ.4ರಿಂದ ಮೀನುಗಾರಿಕೆಯಿಂದ ಹಿಂದಿರುಗಿ ಮಲ್ಪೆ ಬಂದರಿ ನಲ್ಲಿ ಲಂಗರು ಹಾಕಿದ್ದ ಮೀನುಗಾರಿಕಾ ಬೋಟ್‌ಗಳು ಬುಧವಾರ ಮತ್ತೆ ಮೀನಿನ ಭೇಟೆಗಾಗಿ ಸಮುದ್ರಗಿಳಿದಿವೆ.

ಅರಬ್ಬಿಸಮುದ್ರದಲ್ಲಿ ಕಾಣಿಸಿಕೊಂಡ ಚಂಡಮಾರುತ ‘ಲುಬಾನ್’ ಭಾರತದ ಪಶ್ಚಿಮ ಕರಾವಳಿಯಲ್ಲಿ ಹೆಚ್ಚಿನ ಪರಿಣಾಮವನ್ನು ಬೀರದೇ, ಯಮೆನ್ ಹಾಗೂ ಓಮೆನ್ ರಾಷ್ಟ್ರಗಳತ್ತ ಸಾಗಿದ್ದು, ಕರ್ನಾಟಕ ಕರಾವಳಿಯ ಸಮುದ್ರದಲ್ಲಿ ಅಲೆಗಳ ಅಬ್ಬರ ಕಾಣಿಸಿಕೊಳ್ಳದೇ ಶಾಂತವಾಗಿರುವ ಹಿನ್ನೆಲೆಯಲ್ಲಿ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಲಂಗರು ಹಾಕಿದ್ದು ಸಾವಿರಕ್ಕೂ ಅಧಿಕ ಬೋಟುಗಳು ಇಂದು ತಮ್ಮ ಬದುಕಿನ ತುತ್ತನ್ನು ಅರಸುತ್ತಾ ಸಮುದ್ರಕ್ಕೆ ತೆರಳಿವೆ.

ಮಲ್ಪೆ ಬಂದರಿನಿಂದ 200ಕ್ಕೂ ಅಧಿಕ ಅಳಸಮುದ್ರ ಬೋಟ್‌ಗಳು ಬುಧವಾರವೇ ಮೀನುಗಾರಿಕೆಗೆ ತೆರಳಿದ್ದರೆ, ಗುರುವಾರವೂ 600ಕ್ಕೂ ಅಧಿಕ ಬೋಟುಗಳು ತಮ್ಮ ಪ್ರಯಾಣ ಆರಂಭಿಸಿವೆ. ಇನ್ನೆರಡು ದಿನಗಳಲ್ಲಿ ವಾತಾವರಣ ಹೀಗೆ ಇದ್ದರೆ ಉಳಿದೆಲ್ಲಾ ಬೋಟುಗಳು ಇಲ್ಲಿಂದ ಮತ್ಸ ಬೇಟೆಗಾಗಿ ಸಮುದ್ರಕ್ಕೆ ತೆರಳಲಿವೆ ಎಂದು ಮಲ್ಪೆ ಮೀನುಗಾರರ ಸಂಘದ ಅ್ಯಕ್ಷ ಸತೀಶ್ ಕುಂದರ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಮರವಂತೆ, ಉದ್ಯಾವರದ ಕಡೆಕಾರು, ಉಳ್ಳಾಲದಂತಹ ತೀರ ಪ್ರದೇಶಗಳಲ್ಲಿ ದೊಡ್ಡ ದೊಡ್ಡ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿದ್ದು, ಸಮುದ್ರ ಪ್ರಕುಬ್ಧವಾಗಿರುವ ಮಾಹಿತಿ ಸಿಕ್ಕಿದೆ. ಆದರೆ ಮಲ್ಪೆಯಲ್ಲಿ ಅಂತಹ ಯಾವುದೇ ಸನ್ನಿವೇಶದ ಸುಳಿವು ಸಿಕ್ಕಿಲ್ಲ. ಹೀಗಾಗಿ ಸುಮಾರು ಒಂದು ವಾರದ ಬಳಿಕ ಇಲ್ಲಿನ ಬೋಟುಗಳು ಸಮುದ್ರದತ್ತ ಮುಖಮಾಡಿವೆ ಎಂದು ಸತೀಶ್ ಕುಂದರ್ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News