ಉಡುಪಿ: ದ.ವಲಯ ಅಂತರ ವಿವಿ ಮಹಿಳಾ ಖೋ-ಖೋ

Update: 2018-10-11 16:27 GMT

ಉಡುಪಿ, ಅ.11: ದಕ್ಷಿಣ ವಲಯದ ಏಳು ರಾಜ್ಯಗಳ ಒಟ್ಟು 56 ವಿವಿ ತಂಡಗಳು ಪಾಲ್ಗೊಳ್ಳುವ ದಕ್ಷಿಣ ವಲಯ ಅಂತರ ವಿವಿ ಮಹಿಳೆಯರ ಖೋ ಖೋ ಚಾಂಪಿಯನ್‌ಷಿಪ್ ಉಡುಪಿಯ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸಂಚಲನ ಟ್ರಸ್ಟ್ ಇವುಗಳ ಜಂಟಿ ಆಶ್ರಯದಲ್ಲಿ ಅ.15ರಿಂದ 18ರವರೆಗೆ ಉಡುಪಿ ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.

ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಭಾಸ್ಕರ ಶೆಟ್ಟಿ ಎಸ್. ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಕರ್ನಾಟಕ, ತಮಿಳುನಾಡು, ಕೇರಳ, ಪಾಂಡಿಚೇರಿ, ಗೋವಾ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ 56 ವಿವಿಗಳಿಂದ ಸುಮಾರು 1000 ಕ್ರೀಡಾಪಟುಗಳು, 70 ನಿರ್ಣಾಯಕರು ಹಾಗೂ 100 ಮಂದಿ ಸ್ವಯಂಸೇವಕರು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಡಾ.ಶೆಟ್ಟಿ ವಿವರಿಸಿದರು.
ಸ್ಪರ್ಧೆಗಳಿಗಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಎರಡು ಖೋ-ಖೋ ಅಂಕಣ ಗಳನ್ನು ವಿಶೇಷವಾಗಿ ನಿರ್ಮಿಸಲಾಗಿದೆ.ಈ ಅಂಕಣಗಲಲ್ಲಿ ಹೊನಲು ಬೆಳಕಿನಲ್ಲಿ ಪಂದ್ಯಗಳು ನಡೆಯಲಿವೆ. ಇನ್ನೆರಡು ಅಂಕಣಗಳನ್ನು ಉಡುಪಿಯ ಸಂತ ಸಿಸಿಲಿಯಾ ಶಾಲೆಯಲ್ಲಿ ನಿರ್ಮಿಸಲಾಗಿದೆ ಎಂದರು.

ಮಂಗಳೂರು ವಿವಿ ಕ್ರೀಡಾ ಇತಿಹಾಸದಲ್ಲಿ ಸರಕಾರಿ ಕಾಲೇಜೊಂದು ದಕ್ಷಿಣ ವಲಯ ಮಟ್ಟದ ಅಂತರ ವಿವಿ ಸ್ಪರ್ಧೆಯನ್ನು ನಡೆಸುತ್ತಿರುವುದು ಇದೇ ಮೊದಲು ಎಂದವರು ಹೇಳಿದರು.

ಚಾಂಪಿಯನ್‌ಷಿಪ್‌ನ್ನು ಅ.15ರ ಸೋಮವಾರ ಬೆಳಗ್ಗೆ 9:30ಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಉದ್ಘಾಟಿಸಲಿ ದ್ದಾರೆ. ಮಂಗಳೂರು ವಿವಿ ಉಪಕುಲಪತಿ ಡಾ.ಕಿಶೋರ್‌ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಉಡುಪಿ ಸಿಇಒ ಶಿವಾನಂದ ಕಾಪಸಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅಲ್ಲದೇ ಉದ್ಯಮಿ ಡಾ.ಜಿ.ಶಂಕರ್, ಸಂಚನಾ ಟ್ರಸ್ಟ್‌ನ ಪ್ರೇಮ್‌ಪ್ರಸಾದ್ ಶೆಟ್ಟಿ ಹಾಗೂ ಯಶ್ಪಾಲ್ ಸುವರ್ಣ ಉಪಸ್ಥಿತರಿರುವರು.

ಅ.18ರ ಗುರುವಾರ ಬೆಲಗ್ಗೆ 11:30ಕ್ಕೆ ನಡೆಯುವ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭದಲ್ಲಿ ಡಾ.ಕಿಶೋರ್‌ಕುಮಾರ್ ಅಧ್ಯಕ್ಷತೆ ವಹಿಸಲಿದ್ದು, ಮಂಗಳೂರು ವಿವಿ ರಿಜಿಸ್ಟ್ರಾರ್ ಡಾ.ಎಂ.ಎ.ಖಾನ್ ಮುಖ್ಯ ಅತಿಥಿಯಾಗಿರುವರು. ಎಡಿಸಿ ವಿದ್ಯಾಕುಮಾರಿ, ಪೌರಾಯುಕ್ತ ಜನಾರ್ದನ್ ಮುಖ್ಯ ಅತಿಥಿಗಳಾಗಿರುವರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಚಾಲಕ ಹಾಗೂ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ರೋಶನ್‌ಕುಮಾರ್ ಶೆಟ್ಟಿ ಹಾಗೂ ಕಾಲೇಜಿನ ಕಲಾ ವಿಭಾಗದ ಡಾ.ಸೋಜನ್ ಕೆ.ಜಿ. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News