ರಾಜ್ಯ ಮುಕ್ತ ವಿವಿಗೆ ಯುಜಿಸಿಯಿಂದ ಕಾನೂನುಬದ್ಧ ಮಾನ್ಯತೆ: ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ

Update: 2018-10-11 16:28 GMT

ಉಡುಪಿ, ಅ.11: ‘ಉನ್ನತ ಶಿಕ್ಷಣ ಎಲ್ಲರಿಗೂ, ಎಲ್ಲೆಡೆ’ ಎಂಬ ಧ್ಯೇಯೋದ್ದೇಶಗಳೊಂದಿಗೆ 1996ರಲ್ಲಿ ಪ್ರಾರಂಭಗೊಂಡ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (ಕೆಎಸ್‌ಓಯು)ಕ್ಕೆ 2017ರ ಯುಜಿಸಿ ನಿಯಮಾವಳಿಗಳ ಪ್ರಕಾರ 2018-19ನೇ ಶೈಕ್ಷಣಿಕ ವರ್ಷದಿಂದ ಐದು ವರ್ಷಗಳ ಅವಧಿಗೆ ಕಾನೂನುಬದ್ಧ ಮಾನ್ಯತೆ ದೊರಕಿದೆ ಎಂದು ಮುಕ್ತ ವಿವಿಯ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಹೇಳಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವೊಂದು ತಾಂತ್ರಿಕ ಕಾರಣಗಳು ಹಾಗೂ ಯುಜಿಸಿಯ ನಿರ್ದೇಶನಗಲ ಉಲ್ಲಂಘನೆಗಾಗಿ 2015ರ ಜೂನ್ ತಿಂಗಳಲ್ಲಿ ಮುಕ್ತ ವಿವಿಯ ಮಾನ್ಯತೆಯನ್ನು ಯುಜಿಸಿ ರದ್ದುಗೊಳಿಸಿದ್ದು, ಇದೀಗ ಸತತ ಪ್ರಯತ್ನಗಳ ಬಳಿಕ ಈ ಸಾಲಿನಿಂದ ಮತ್ತೆ ಯುಜಿಸಿಯಿಂದ ಕೆಎಸ್‌ಓಯು ಕಾನೂನುಬದ್ಧ ವಿವಿ ಮಾನ್ಯತೆಯನ್ನು ಗಳಿಸಿದೆ ಎಂದವರು ತಿಳಿಸಿದರು.

ವಿವಿಯ ಪ್ರಸ್ತಾವನೆಯನ್ನು ಪರಿಗಣಿಸಿದ ಯುಜಿಸಿಯು 2018-19ನೇ ಶೈಕ್ಷಣಿಕ ಸಾಲಿನಿಂದ 2022-23ರವರೆಗೆ ಐದು ವರ್ಷಗಳ ಅವಧಿಗೆ ಮಾನ್ಯತೆಯನ್ನು ನೀಡಿದೆ. ವಿವಿಗೆ ಈಗ 17 ಅಂತರ್‌ಗೃಹ ತಾಂತ್ರಿಕೇತರ ಕಾರ್ಯಕ್ರಮಗಳನ್ನು ಪ್ರಾರಂಭಿಸಲು ಅನುಮತಿಯನ್ನು ನೀಡಿದೆ. ಇವುಗಳಲ್ಲಿ ಬಿ.ಎ., ಬಿ.ಕಾಂ,, ಬಿ.ಲಿಬ್‌ಐಎಸ್‌ಸಿ, ಎಂ.ಎ(ಕನ್ನಡ, ಇಂಗ್ಲೀಷ್, ಹಿಂದಿ, ಪ್ರಾಚೀನ ಇತಿಹಾಸ ಮತ್ತು ಪುರಾತನ ಅಧ್ಯಯನ, ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಾರ್ವಜನಿಕ ಆಡಳಿತ, ಸಮಾಜಶಾಸ್ತ್ರ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ), ಎಂ.ಕಾಂ. ಎಂ.ಲಿಬ್‌ಐಎಸ್ಸಿ ಹಾಗೂ ಎಂ.ಎಸ್ಸಿ (ಪರಿಸರ ವಿಜ್ಞಾನ) ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ದೊರೆತಿದೆ ಎಂದರು. ಈ ಎಲ್ಲಾ 17 ಕಾರ್ಯಕ್ರಮಗಳಿಗೆ ಪ್ರವೇಶಕ್ಕೆ ಅ.20 ಕೊನೆಯ ದಿನವಾಗಿರುತ್ತದೆ ಎಂದು ಪ್ರೊ.ಶಿವಲಿಂಗಯ್ಯ ತಿಳಿಸಿದರು.

2019ರ ಜನವರಿ ತಿಂಗಳಿನಿಂದ ಬಿ.ಇಡಿ ಹಾಗೂ ಎಂಬಿಎ ಕೋರ್ಸ್‌ಗಳು ಪ್ರಾರಂಭಗೊಳ್ಳಲಿದ್ದು, 12 ಕೋರ್ಸ್‌ಗಳ ಪ್ರಾರಂಭಕ್ಕೂ ಈಗ ಯುಜಿಸಿಯಿಂದ ಮಾನ್ಯೆ ದೊರಕಿದೆ ಎಂದವರು ನುಡಿದರು.

ಪದವಿಗೂ ಮಾನ್ಯತೆ:  ಸಾಂಪ್ರದಾಯಿಕ ವಿವಿಗಳಿಂದ ಪಡೆದ ಪದವಿ ಗಳಿಗೂ, ಮುಕ್ತ ವಿವಿಯಿಂದ ಪಡೆದ ಪದವಿಗಳಿಗೆ ಈಗ ಯಾವುದೇ ವ್ಯತ್ಯಾಸಗಳಿಲ್ಲ. ಈ ಬಗ್ಗೆ ಯುಜಿಸಿಯು ಸುತ್ತೋಲೆಗಳನ್ನು ಹೊರಡಿಸಿದೆ. ಅಲ್ಲದೇ ನ್ಯಾಯಾಲಯಗಳೂ ಈ ಬಗ್ಗೆ ತೀರ್ಪು ನೀಡಿವೆ. ಮುಕ್ತ ವಿವಿಯಿಂದ ಪದವಿ ಪಡೆದ ವಿದ್ಯಾರ್ಥಿಗಳು ಕೆಎಎಸ್, ಐಎಸ್, ಐಪಿಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಬಹುದು.

ಅಲ್ಲದೇ ಕೇಂದ್ರ ಮತ್ತು ರಾಜ್ಯ ಸರಕಾರಗಳು ಆಹ್ವಾನಿಸುವ ವಿವಿಧ ಹುದ್ದೆಗಳಿಗೆ, ಶಿಕ್ಷಣ ಇಲಾಖೆಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆಯನ್ನೂ ಹೊಂದಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೇ ಮುಕ್ತ ವಿವಿಯಲ್ಲಿ ಪ್ರವೇಶಗಳನ್ನು ಪಡೆಯಬಹುದು. ಇನ್ನು ಮುಂದೆ ಮುಕ್ತ ವಿವಿಯಲ್ಲಿ ಯುಜಿಸಿಯುನ ಯಾವುದೇ ನಿಯಮಗಳು ಉಲ್ಲಂಘನೆಯಾಗದಂತೆ ಎಲ್ಲಾ ಕ್ರಮ, ಎಚ್ಚರಿಕೆ ವಹಿಸಲಾಗುವುದು ಎಂದರು.

ಈ ಬಾರಿಯ ಪ್ರವೇಶಕ್ಕೆ ಅ.20 ಕೊನೆಯ ದಿನವಾಗಿದೆ. 17 ಕೋರ್ಸ್‌ಗಳಿಗೆ ಈವರೆಗೆ ಒಟ್ಟು 10,400 ಮಂದಿ ಪ್ರವೇಶವನ್ನು ಪಡೆದಿದ್ದಾರೆ. ಉಡುಪಿಯಲ್ಲಿ 150 ಹಾಗೂ ದಕ್ಷಿಣ ಕನ್ನಡದಿಂದ 200 ಮಂದಿ ಪ್ರವೇಶ ಪಡೆದಿದ್ದಾರೆ. ರಾಜ್ಯದಲ್ಲಿ ಚಾಮರಾಜ ನಗರಿಂದ ಅತ್ಯಧಿಕ ಮಂದಿ ಪ್ರವೇಶ ಬಯಸಿದ್ದಾರೆ ಎಂದು ಪ್ರೊ.ಶಿವಲಿಂಗಯ್ಯ ತಿಳಿಸಿದರು.

ಕರ್ನಾಟಕ ರಾಜ್ಯ ಮುಕ್ತ ವಿವಿ ರಾಜ್ಯವ್ಯಾಪಿ ಕಾರ್ಯ ನಿರ್ವಹಿಸುತ್ತಿದೆ. ರಾಜ್ಯದಲ್ಲಿ ಒಟ್ಟು 17 ಪ್ರಾದೇಶಿಕ ಕೇಂದ್ರಗಳನ್ನು ತೆರೆಯಲಾಗಿದೆ. ಉಡುಪಿಯಲ್ಲೂ ಬನ್ನಂಜೆಯ ಹಳೆ ಜಿಪಂ ಕಟ್ಟಡದಲ್ಲಿ ಪ್ರಾದೇಶಿಕ ಕೇಂದ್ರವಿದ್ದು, ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ನಾಲ್ಕು ಕಲಿಕಾ ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ. ಇವುಗಳು ಎಂಜಿಎಂ ಕಾಲೇಜು, ಡಾ.ಜಿ.ಶಂಕರ್ ಸರಕಾರಿ ಮಹಿಳಾ ಕಾಲೇಜು, ಕಾರ್ಕಳದ ಭುವನೇಂದ್ರ ಕಾಲೇಜು ಹಾಗೂ ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸಲಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News