ಸಮಗ್ರ ಅಭಿವೃದ್ಧಿಗೆ ಕ್ಯಾಂಪ್ಕೊ ಮಾದರಿ: ಸಚಿವ ಬಂಡೆಪ್ಪ ಕಾಶೆಂಪೂರ

Update: 2018-10-11 16:30 GMT

ಮಂಗಳೂರು, ಅ.11: ಸಹಕಾರ ತತ್ವಗಳ ಸಮರ್ಪಕ ಅನುಷ್ಠಾನದಿಂದ ಸಮಗ್ರ ಅಭಿವೃದ್ಧಿ ಸಾಧ್ಯ ಎನ್ನುವುದಕ್ಕೆ ಕ್ಯಾಂಪ್ಕೊ ಮಾದರಿಯಾಗಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ತಿಳಿಸಿದ್ದಾರೆ. ಕ್ಯಾಂಪ್ಕೊ ಕೇಂದ್ರ ಕಚೇರಿಗೆ ಬುಧವಾರ ಭೇಟಿ ನೀಡಿದ ಬಳಿಕ ಮಾತನಾಡಿದ ಸಚಿವರು, ಕ್ಯಾಂಪ್ಕೊದ ಕಾರ್ಯಚಟುವಟಿಕೆಗಳನ್ನು ತಿಳಿದುಕೊಂಡ ಬಳಿಕ ಇಂತಹ ಸಂಸ್ಥೆಗಳನ್ನು ಹುಟ್ಟುಹಾಕುವ ಮೂಲಕ ಕೃಷಿಕರನ್ನು ಶೋಷಣೆ ಮುಕ್ತಗೊಳಿಸಬಹುದು. ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ನಿರ್ಧರಿಸುವ ಸಾಮರ್ಥ್ಯ ಪಡೆದು ಆರ್ಥಿಕ ಸಬಲೀಕರಣ ಹಾಗೂ ಸಮಗ್ರ ಅಭಿವೃದ್ಧಿಗೆ ಅದು ನಾಂದಿಯಾಗಲಿದೆ ಎಂದು ನುಡಿದರು.

ಸಂಸ್ಥೆಯ ಪರವಾಗಿ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಭಂಡಾರಿ ಎಂ. ಸಚಿವರನ್ನು ಶಾಲು, ಹೊದಿಸಿ ಸನ್ಮಾನಿಸಿದರು. ಎಸ್‌ಸಿಡಿಸಿಸಿ ಬ್ಯಾಂಕ್ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರಕುಮಾರ್ ಅವರನ್ನು ಸಂಸ್ಥೆಯ ನಿರ್ದೇಶಕ ಶ್ರೀಕೃಷ್ಣ ಪ್ರಸಾದ ಮಡ್ತಿಲ ಸನ್ಮಾನಿಸಿದರು.

ರಾಜ್ಯ ಸಹಕಾರಿ ಸಂಘಗಳ ರಿಜಿಸ್ಟ್ರಾರ್ ಎಂ.ಕೆ. ಅಯ್ಯಪ್ಪ, ರಾಜ್ಯ ಸಹಕಾರಿ ಸಂಘಗಳ ಜಂಟಿ ರಿಜಿಸ್ಟ್ರಾರ್ ಲಿಂಗರಾಜು, ಸಹಕಾರ ಇಲಾಖೆಯ ವಿಶೇಷ ಕರ್ತವ್ಯಾಧಿಕಾರಿ ವೆಂಕಟಸ್ವಾಮಿ, ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕ ಬಿ.ಕೆ. ಸಲೀಂ, ಎಸ್‌ಡಿಸಿಸಿ ಬ್ಯಾಂಕ್ ನಿರ್ದೇಶಕರು ಮತ್ತು ಕ್ಯಾಂಪ್ಕೊದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News